ಬೆಳದಿಂಗಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣದ ಸಾರಾಂಶ

ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಅಧ್ಯಕ್ಷರಾಗಿದ್ದ ಎಚ್.ಡುಂಡಿರಾಜ್ ಭಾಷಣದ ಸಾರಾಂಶ
ಫ಼ೆಬ್ರವರಿ ೯-೨೦೦೯ರಬೆಳದಿಂಗಿಳ ರಾತ್ರಿ ಅಜೆಕಾರಿನ ಕುರ್ಪಾಡಿಯಲ್ಲಿ ಸಾಹಿತ್ಯ ಲೋಕದ ಅದ್ಭುತವೊಂದು ನಡೆಯಿತು.ಅದುವೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ.ಈ ಬಾರಿ ನವೆಂಬರ್ ತಿಂಗಳಲ್ಲಿ ಇಂತಹದ್ದೆ ಕಾರ್ಯಕ್ರಮ ಮೂಡುಬಿದಿರೆಯಲ್ಲಿ ನಡೆಯಲಿದೆ.ಮೊದಲ ಸಮ್ಮೇಳನದ ಅಧ್ಯಕ್ಸರಾಗಿದ್ದ ಚುಟುಕು ಕವಿ, ಕುಟುಕು ಕವಿ ಡುಂಡಿರಾಜ್ ಅವರ ಭಾಷಣ ಇದು.
ಒಂಬತ್ತು ಗ್ರಾಮೋತ್ಸವಗಳನ್ನು ಯಶಸ್ವಿಯಾಗಿ ನಡೆಸಿರುವ ಕುರ್ಪಾಡಿ ಯುವ ವೃಂದ ದಶಮಾನೋತ್ಸವದ ಅಂಗವಾಗಿ ನಡೆಸುತ್ತಿರುವ ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಅವಕಾಶ ನನಗೆ ಸಿಕ್ಕಿರುವುದಕ್ಕೆ ತುಂಬಾ ಸಂತೋಷ ಅನ್ನಿಸುತ್ತದೆ.

ಇದು ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯ. ಪ್ರಶಸ್ತಿ, ಗೌರವಗಳು ಸ್ವಪ್ರಯತ್ನ, ವಶೀಲಿ ಇಲ್ಲದೆ ಬರುವುದಿಲ್ಲ ಅನ್ನುವಂತಹ ಪರಿಸ್ಥಿತಿ ಸಾಹಿತ್ಯ ರಂಗದಲ್ಲಿದೆ. ಆದರೆ, ಈ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಅವಕಾಶವನ್ನು ನನಗೆ ಸಮ್ಮೇಳನದ ಸಂಘಟಕರು ಅವರಾಗಿಯೇ ನೀಡಿದ್ದಾರೆ. ಇದು ನನ್ನ ಸಂತೋಷಕ್ಕೆ ಕಾರಣ.

ನನ್ನ ಸಂತೋಷಕ್ಕೆ ಇನ್ನೂ ಹಲವು ಕಾರಣಗಳಿವೆ. ದೊಡ್ಡ ದೊಡ್ಡ ಸಾಹಿತ್ಯ ಸಮ್ಮೇಳನಗಳು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ನಡೆಯುತ್ತವೆ. ಆದರೆ, ಕುರ್ಪಾಡಿ ಯುವ ವೃಂದದವರು ರಾಜ್ಯ ಮಟ್ಟದ ಈ ಸಮ್ಮೇಳನವನ್ನು ಅಜೆಕಾರಿನಂಥ ಹಳ್ಳಿಯಲ್ಲಿ ಏರ್ಪಡಿಸಿದ್ದಾರೆ. ಇದು ಬಹಳ ಮುಖ್ಯವಾದ ಸಂಗತಿ.

ನಗರದ ಜನರಿಗೆ ಇಂದು ಸಾಹಿತ್ಯ, ಲಲಿತ ಕಲೆಗಳು ಬೇಡವಾಗುತ್ತಿದೆ. ಅವರ ಆಸಕ್ತಿ ಕೇವಲ ಭೋಗ ಜೀವನದ ಬಗ್ಗೆ. ಅದಕ್ಕಾಗಿ ಹೆಚ್ಚು ಹೆಚ್ಚು ಹಣಗಳಿಸುವುದೊಂದೆ ಅವರ ಗುರಿ. ಹೀಗಾಗಿ ನಗರದಲ್ಲಿ ನಡೆವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಕುರ್ಚಿಗಳು ಖಾಲಿ ಇರುತ್ತವೆ.

ಎಲ್ಲಾ ವಿಚಾರಗಳಲ್ಲೂ ನಗರದವರನ್ನು ಅನುಸರಿಸುವ ಹಳ್ಳಿಯ ಜನ ಸಾಹಿತ್ಯ, ಲಲಿತ ಕಲೆಗಳ ವಿಚಾರದಲ್ಲೂ ನಗರದವರನ್ನು ಅನುಕರಿಸಲು ತೊಡಗಿರುವುದು ದುರಂತ. ಯಕ್ಷಗಾನದವರು, ನಾಟಕದವರು ಸಿನಿಮಾದವರನ್ನು ಅನುಕರಿಸಲು ಹೊರಟಿರುವುದು, ನಗರದ ವಿಕೃತಿ, ಗ್ರಾಮೀಣ ಸಂಸ್ಕೃತಿಯನ್ನು ಪ್ರಭಾವಿಸುತ್ತಿರುವುದನ್ನು ಸೂಚಿಸುತ್ತದೆ.

ಆದ್ದರಿಂದ ನಮ್ಮ ಪರಿಷತ್ತು ಅಕಾಡೆಮಿಗಳು ನಗರ ಕೇಂದ್ರಿತ ದೃಷ್ಟಿಕೋನವನ್ನು ಬಿಟ್ಟು, ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಬೇಕು. ಸಾಹಿತ್ಯಕ್ಕೆ ಪೂರಕವಾದ ವಾತಾವರಣವಿರುವುದು ಹಳ್ಳಿಗಳಲ್ಲಿ ಮಾತ್ರ.

ನನ್ನ ಬಾಲ್ಯದ ೧೬ ವರ್ಷಗಳನ್ನು ಹಟ್ಟಿಕುದ್ರು ಎಂಬ ಪುಟ್ಟ ಹಳ್ಳಿಯಲ್ಲಿ ಕಳೆದ ನಾನು, ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡದ್ದು ಆ ಸಮಯದಲ್ಲಿ. ನಮ್ಮೂರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನೆ, ಕೃಷಿ ಕೆಲಸಗಾರರ ಹಾಡುಗಳು, ಮನೆಯಲ್ಲಿ ಕೇಳಿಬರುತ್ತಿದ್ದ ಸಂಪ್ರದಾಯದ ಹಾಡುಗಳು, ತಂದೆಯವರ ಬಾಯಿಯಿಂದ ಬರುತ್ತಿದ್ದ ಮಂತ್ರಗಳು, ಶ್ಲೋಕಗಳು, ಶಾಲೆಯಲ್ಲಿ ಗುರುಗಳು ಕಲಿಸುತ್ತಿದ್ದ ಶಿಶು ಗೀತೆಗಳು ನನ್ನನ್ನು ಆಗಲೇ ಕವಿಯನ್ನಾಗಿ ಮಾಡಿದವು. ನನ್ನ ಬಾಲ್ಯವನ್ನು ನಾನು ಮಂಗಳೂರು ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ಕಳೆದಿದ್ದರೆ ಖಂಡಿತಾ ನಾನು ಕವಿ ಆಗುತ್ತಿರಲಿಲ್ಲ ಅನ್ನಿಸುತ್ತದೆ. ನಮ್ಮ ಅನೇಕ ಒಳ್ಳೆಯ ಸಾಹಿತಿಗಳ ಬೇರುಗಳು ಇರುವುದು ಹಳ್ಳಿಯಲ್ಲಿ.

ಕವಿ ಯಾಕಾಗಬೇಕು ? ಸಾಹಿತ್ಯ ಯಾಕೆ ಬೇಕು ? ಎಂದು ಕೇಳುವವರೂ ನಮ್ಮ ನಡುವೆ ಇದ್ದಾರೆ. ಎಲ್ಲವನ್ನೂ ಆರ್ಥಿಕ ದೃಷ್ಟಿಯಿಂದ ನೋಡುವವರಿಗೆ ಸಾಹಿತ್ಯದಿಂದ ಏನೂ ಲಾಭವಿಲ್ಲ ಅನ್ನಿಸಬಹುದು.
ಬರೆದೂ ಬರೆದೂ ಕನ್ನಡ ಕವನ
ಪಡೆದೆನು ಕನ್ನಡಕವನ್ನ !
ಎಂದು ನಾನೇ ವ್ಯಂಗ್ಯವಾಡಿದ್ದುಂಟು. ಆದರೆ, ನನಗೆ ನಂತರ ಅನ್ನಿಸಿದ್ದೇ ಬೇರೆ. ಕಾವ್ಯ ಅನ್ನುವುದು, ಸಾಹಿತ್ಯ ಅನ್ನುವುದು ಕನ್ನಡಕದ ಹಾಗೆ! ಅದರ ಮೂಲಕ ನೋಡಿದರೆ ಸಮಾಜದ ಸರಿಯಾದ ಚಿತ್ರ ಕಾಣುತ್ತದೆ.

ಸಾಹಿತ್ಯ ನಮ್ಮ ಹೊಟ್ಟೆಯ ಹಸಿವನ್ನು ನೀಗಿಸುವುದಿಲ್ಲ. ಸಾಹಿತ್ಯದಿಂದ ಕ್ರಾಂತಿಯಾಗುವುದಿಲ್ಲ. ಆದರೆ, ನಮ್ಮ ಬೌದ್ಧಿಕ ಹಸಿವನ್ನು ತಣಿಸಲು ಸಾಹಿತ್ಯ ಬೇಕು. ನಮ್ಮ ಬದುಕಿಗೆ ಹೊಟ್ಟೆಯೇ ಕೇಂದ್ರವಾದರೆ ಪ್ರಾಣಿಗಳಿಗೂ ನಮಗೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಮನುಷ್ಯ ಭಾವ ಜೀವಿ ಮತ್ತು ಬುದ್ಧಿ ಜೀವಿ ಆಗಿರುವುದರಿಂದ ಆತ ಸಾಹಿತ್ಯ ಹಾಗೂ ಲಲಿತ ಕಲೆಗಳನ್ನು ಪೋಷಿಸಿಕೊಂಡು ಬಂದಿದ್ದಾನೆ.

ಸಾಹಿತ್ಯ ಹಾಗೂ ಲಲಿತ ಕಲೆಗಳು ಹುಟ್ಟಿದ್ದೇ ಹಳ್ಳಿಯಲ್ಲಿ. ಜಾನಪದ ಸಾಹಿತ್ಯವೇ ಶಿಷ್ಟ ಸಾಹಿತ್ಯದ ಮೂಲ. ಯಕ್ಷಗಾನ, ಭರತನಾಟ್ಯ, ಶಾಸ್ತ್ರೀಯ ಸಂಗೀತಗಳಿಗೂ ಜನಪದ ನೃತ್ಯ ಹಾಗೂ ಸಂಗೀತಗಳೇ ಮೂಲ ಎಂಬ ವಾದವಿದೆ. ಹೀಗಾಗಿ, ಸಾಹಿತ್ಯ ಲಲಿತಕಲೆಗಳು ಉಳಿಯಬೇಕಾದರೆ, ನಗರದವರಂತೆ ಗ್ರಾಮೀಣ ಪ್ರದೇಶದ ಜನರು ಅವುಗಳಲ್ಲಿ ಆಸಕ್ತಿ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಶ್ರೀ ಶೇಖರ ಅಜೆಕಾರು ಹಾಗೂ ಅವರ ಮಿತ್ರರು ಕಳೆದ ಹತ್ತು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ.

ಕೇವಲ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದರೆ ಸಾಲದು. ಇವುಗಳ ಜತೆಗೆ ನಾವು ನೆಮ್ಮದಿಯಿಂದ ಬದುಕಲು ಅಗತ್ಯವಾದ ಕುಡಿಯುವ ನೀರು, ಸಂಚಾರ ಸಾಧನ, ಸಂಪರ್ಕ ಸಾಧನಗಳು ಹಳ್ಳಿಗಳಲ್ಲಿ ಸಿಗುವಂತಾಗಬೇಕು. ಹಳ್ಳಿಗಳಲ್ಲಿ ದುಡಿಯುವವರಿಗೆ ಕೈತುಂಬಾ ಹಣ ಗಳಿಸುವ ಅವಕಾಶ ಸೃಷ್ಟಿಯಾಗಬೇಕು. ಆಗ ಮಾತ್ರ ಹಳ್ಳಿಯ ಜನ ನಗರಕ್ಕೆ ವಲಸೆ ಹೋಗುವುದನ್ನು ಕಡಿಮೆ ಮಾಡಬಹುದು. ನಗರಕ್ಕೆ ಹಳ್ಳಿಗಳಿಂದ ವಲಸೆ ಹೋಗುವುದು ಹೀಗೆಯೇ ಮುಂದುವರಿದರೆ ಅದರಿಂದ ನಮ್ಮ ಹಳ್ಳಿಗಳು ಮಾತ್ರವಲ್ಲ ನಗರಗಳೂ ಸರ್ವನಾಶ ಆಗುವುದು ಖಂಡಿತ.

ಕನ್ನಡ ಭಾಷೆಯ ಸ್ಥಿತಿಗತಿಯ ಬಗ್ಗೆ ಯೋಚಿಸಿದಾಗ ಇಂದು ಸಂತೋಷಕ್ಕಿಂತ ಆತಂಕವೇ ಹೆಚ್ಚಾಗುತ್ತದೆ. ಆಂಗ್ಲ ಮಾಧ್ಯಮ ಎಂಬ 'ಯಮರಾಯ' ಕನ್ನಡದ ಕಂದಮ್ಮರ ಕತ್ತು ಹಿಚುಕುತ್ತಿದ್ದಾನೆ. ಆಂಗ್ಲ ಮಾಧ್ಯಮದ ಹಾವಳಿ ನಗರಗಳಲ್ಲಿ ಮಾತ್ರವಲ್ಲ ಹಳ್ಳಿಗಳಿಗೂ ವ್ಯಾಪಿಸಿದೆ. ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಕಳಿಸಬೇಡಿ ಎಂದು ನಾನು ಹೇಳುತ್ತಿಲ್ಲ. ಹಾಗೆ ಹೇಳುವ ನೈತಿಕ ಹಕ್ಕು ನಾನೂ ಸೇರಿದಂತೆ ನಮ್ಮ ಅನೇಕ ಸಾಹಿತಿಗಳಿಗೆ ಇಲ್ಲ.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಒಳ್ಳೆಯ ಕೆಲಸ ಸಿಗುವುದಿಲ್ಲ ಎಂಬ ಕಾರಣಕ್ಕೆ ನಾವೆಲ್ಲರೂ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸುತ್ತೇವೆ. ಇದು ವಾಸ್ತವವೂ ಹೌದು. ಎಲ್ಲಿಯವರೆಗೆ ಸರಕಾರ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದ ಭರವಸೆ ನೀಡುವುದಿಲ್ಲವೊ ಅಲ್ಲಿಯವರೆಗೆ ಇಂಗ್ಲೀಷ್ ಮಾಧ್ಯಮದ ಯಮರಾಯನನ್ನು ತಡೆಯುವುದು ಸಾಧ್ಯವಿಲ್ಲ.

ಇಂದು ಯಾವುದೇ ಸಾಹಿತ್ಯಿಕ ಸಮಾರಂಭಗಳಿಗೆ ಹೋದರೂ ಅಲ್ಲಿ ಮಧ್ಯ ವಯಸ್ಕರು ಮತ್ತು ನಿವೃತ್ತರೆ ಹೆಚ್ಚಾಗಿ ಕಾಣ ಸಿಗುತ್ತಾರೆ. ಯುವಕ, ಯುವತಿಯರು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ ಪರಿಣಾಮವಾಗಿ ಕನ್ನಡದ ಕಾರ್ಯಕ್ರಮಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಇದಕ್ಕೆ ಪಾಲಕರೂ ಕಾರಣ. ಮಕ್ಕಳಿಗೆ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಕೆಲಸವನ್ನು ನಾವು, ಪಾಲಕರು ಮಾಡಬೇಕಾಗಿದೆ. ಶಾಲೆಯಲ್ಲಿ ಮಕ್ಕಳು ಆಂಗ್ಲಮಾಧ್ಯಮದಲ್ಲಿ ಓದುವುದು ಅನಿವಾರ್ಯವಾಗಿರಬಹುದು. ಆದರೆ ಮನೆಯಲ್ಲಿ ಮಕ್ಕಳಿಗೆ ಕನ್ನಡ ಪತ್ರಿಕೆಗಳನ್ನು, ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿ ಬೆಳೆಸಬೇಕು. ಕನ್ನಡದ ಬಗ್ಗೆ ಹೆತ್ತವರಲ್ಲೆ ಕೀಳರಿಮೆ ಇದ್ದರೆ ಮಕ್ಕಳು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಹೇಗೆ ?

ಕನ್ನಡ ಹೋರಾಟಗಾರರಿಂದ ಕನ್ನಡದ ಉದ್ಧಾರ ಸಾಧ್ಯವಿಲ್ಲ. ಕನ್ನಡದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಗೊಳ್ಳುವುದು ತಪ್ಪು.
ಕನ್ನಡನಾಡು ಚಂದ
ಕನ್ನಡನುಡಿ ಚಂದ, ಕನ್ನಡದ ನೆಲ ಚಂದ
ಕನ್ನಡದ ಆಕಾಶ ಚಂದ
ಕನ್ನಡಕ್ಕೆ ಹೋರಾಡುವುದಕ್ಕೆ ಕೊಡ್ರೀ ನೂರು ರೂಪಾಯಿ ಚಂದಾ !
ಎಂದು ಭಯೋತ್ಪಾದನೆಗೆ ಇಳಿದರೆ ಅದರಿಂದ ಕನ್ನಡದ ಉದ್ಧಾರ ಆಗುವುದಿಲ್ಲ. ಭಾರತದಂಥ ಬಹು ಭಾಷೆಯ, ಬಹು ಸಂಸ್ಕೃತಿಯ ದೇಶದಲ್ಲಿ ಭಾಷೆ ಹಾಗೂ ಧರ್ಮದ ವಿಷಯದಲ್ಲಿ ದುರಭಿಮಾನ, ಅಂಧಾಭಿಮಾನ ಸೂಕ್ತವಲ್ಲ. ಮಾತೃಭಾಷೆ ಬೇರೆಯಾಗಿದ್ದರೂ ಕನ್ನಡವನ್ನು ಬೆಳೆಸಿದ ಸಾಹಿತಿಗಳು ಬೇಕಾದಷ್ಟು ಜನರಿದ್ದಾರೆ.
ಕನ್ನಡಕ್ಕೆ ನಾವು ನೀವು
ಅಂಥದ್ದೇನೂ ಕೊಟ್ಟಿಲ್ಲ
ನಿಜವಾಗಿ ಕೊಟ್ಟದ್ದು
ಜರ್ಮನಿಯ ಕಿಟ್ಟಲ್ಲ!

ತಾಯಿನುಡಿ ಬೇರೆಯಾಗಿದ್ದರೂ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಳ್ಳುವುದು ಸಾಧ್ಯ ಎಂಬುದಕ್ಕೆ ನಮ್ಮ ಕರಾವಳಿ ಜಿಲ್ಲೆಗಳು ಅತ್ಯುತ್ತಮ ಉದಾಹರಣೆ. ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳನ್ನು ಮನೆಯಲ್ಲಿ ಆಡುವವರು ಕನ್ನಡದ ಕೆಲಸವನ್ನು ಅದ್ಭುತವಾಗಿ ಮಾಡುತ್ತಿದ್ದಾರೆ. ಇತರರಿಗೆ ಆದರ್ಶವಾಗುವಂತೆ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನಗಳನ್ನು ಈ ಜಿಲ್ಲೆಯಲ್ಲಿ ಮಾಡಿದ ರೀತಿ ಇನ್ನಾರಿಗೂ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಾವು ಹೆಮ್ಮೆಪಟ್ಟುಕೊಳ್ಳಬೇಕು. ಇಂದಿಲ್ಲಿ ನಡೆಯುತ್ತಿರುವ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಕಿರೀಟಕ್ಕೆ ಇನ್ನೊಂದು ರತ್ನ.

ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಎಂಬ ಬಗ್ಗೆ ಎರಡು ಮಾತಿಲ್ಲ. ಆದರೆ, ನೆರೆ ರಾಜ್ಯದ ಕೆಲವು ಅಂಧಾಭಿಮಾನಿಗಳನ್ನು ನಾವು ಅನುಸರಿಸಬಾರದು. ಅವರ ಮೂರ್ಖತನದ ಹಿಂಸಾಚಾರಗಳನ್ನು ನೋಡಿ ನಾವೂ ಮೂರ್ಖರಂತೆ ವರ್ತಿಸಬಾರದು. ಅದೇ ಸಮಯಕ್ಕೆ ನಮ್ಮ ರಾಜ್ಯದಲ್ಲಿರುವ ಇತರ ಭಾಷೆಯ ಜನರು ಕನ್ನಡದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ನನ್ನ ಈ ಆಶಯವನ್ನು ಚುಟುಕಾಗಿ ಹೀಗೆ ವ್ಯಕ್ತಪಡಿಸುತ್ತೇನೆ.
ಇತರ ಭಾಷೆಗಳೂ ಇರಲಿ
ಕನ್ನಡದೊಂದಿಗೆ
ಬಗೆಯಾಡಲಿ ಅವು
ಕನ್ನಡದೊಂದಿಗೆ
ಎಣ್ಣೆಯಾಗಲಿ
ಕನ್ನಡ-ದೊಂದಿಗೆ!
(ಫೆ- ೯- ಫೆ ೧೦ ರಂದು ಅಜೆಕಾರು ಕುರ್ಪಾಡಿಯಲ್ಲಿ ನಡೆದ ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಎಚ್. ಡುಂಡಿರಾಜ್ ಅವರ ಅಧ್ಯಕ್ಷ ಭಾಷಣ)

Twitter Facebook Delicious Digg Favorites More

 
Twitter Facebook Delicious Digg Favorites More