ಬೆಳದಿಂಗಳ ಸಾಹಿತ್ಯ ಸಮ್ಮೇಳನ ಯಶಸ್ವಿ ಪ್ರಯೋಗ

ಕಾರ್ಕಳ ಅಜೆಕಾರು ಕುರ್ಪಾಡಿಯಲ್ಲಿ ಹೊಸ ಯೋಜನೆಯ ಸಾಕಾರ
ಬೆಳದಿಂಗಳ ಸಾಹಿತ್ಯ ಸಮ್ಮೇಳನ ಯಶಸ್ವಿ ಪ್ರಯೋಗ
ಕೆ. ಪದ್ಮಾಕರ ಭಟ್
ಹುಣ್ಣಿಮೆ ಚಂದಿರನ ತಂಪಾದ ಹಾಲು ಬೆಳದಿಂಗಳ ರಾತ್ರಿ ಹಳ್ಳಿಯ ಮೂಲೆಯೊಂದರಲ್ಲಿ ಕನ್ನಡ ಸಾಹಿತ್ಯ ಲೋಕ ತೆರೆದ ನೂತನ ಪ್ರಯೋಗವೊಂದು ಕಾರ್ಕಳ ಅಜೆಕಾರಿನ ಕುರ್ಪಾಡಿಯಲ್ಲಿ ಯಶ ಕಂಡಿದೆ. ಡುಂಡಿರಾಜ್ ಅಧ್ಯಕ್ಷತೆ ಅದಕ್ಕೆ ಸೊಗ ನೀಡಿದೆ.
ಫೆ. ೯ ರ ಸೂರ್ಯಾಸ್ತದಿಂದ ಫೆ. ೧೦ ರ ಸೂರ್ಯೋದಯದ ವರೆಗೆ ನಡೆದ ಈ ಅಪೂರ್ವ ಸಾಹಿತ್ಯ ಸಮ್ಮೇಳನದಲ್ಲಿ ಸಾವಿರ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಸಾಹಿತ್ಯ ಪ್ರಮುಖರು, ನಾಡಿನ ಗಣ್ಯರು, ಜನಪ್ರತಿನಿಧಿಗಳು ಕಲೆತು ಈ ಸಾಹಿತ್ಯ ಸಮ್ಮೇಳನದ ಸಿಹಿ ಸವಿದು ಸಮ್ಮೇಳನದ ಕಂಪನ್ನು ಆಸ್ವಾದಿಸಿದರು. ಪತ್ರಕರ್ತ ಶೇಖರ ಅಜೆಕಾರು ಅವರ ಈ ಕಲ್ಪನೆಯ ಕೂಸಿಗೆ ಕುಲಾವಿ ತೊಡಿಸಿದವರು ಸಾಮಾಜಿಕ ಕಾರ್ಯಕರ್ತ ಡಾ| ಸಂತೋಷ ಕುಮಾರ್ ಶೆಟ್ಟಿ, ಪ್ರಕೃತ ಜಿಲ್ಲಾ ಪಂಚಾಯತ್ ಸದಸ್ಯರು. ಈ ಇಬ್ಬರು ಅನೇಕ ಹಿತೈಷಿ , ಸಾಹಿತಿ ಮಿತ್ರರನ್ನು ಸಂಘಟಿಸಿ ನಗರಪ್ರದೇಶಗಳಲ್ಲಿ ಈ ವರೆಗೆ ನಡೆದ ಸಾಹಿತ್ಯ ಸಮ್ಮೇಳನಗಳಿಗೆ ಬಿಟ್ಟಿಲ್ಲದ ಅದಕ್ಕಿಂತಲೂ ಹೆಚ್ಚು ಅರ್ಥಪೂರ್ಣವೆನಿಸಿದ ರೀತಿಯಲ್ಲಿ ಈ ಹೊಸ ಪ್ರಯೋಗವನ್ನು ಸಾಕಾರಗೊಳಿಸಿದ್ದಾರೆ.
ಸಮ್ಮೇಳನ ಉದ್ಘಾಟನೆ, ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನಗಳೊಂದಿಗೆ ಸಮೃದ್ಧವಾಗಿ ಶೋಭಿಸಿತು. ರಾತ್ರಿಯಿಡಿ ನಡೆದ ಈ ಕಾರ್ಯಕ್ರಮ ಸೊರಗುತ್ತಿರುವ ಸಾಹಿತ್ಯ ಲೋಕಕ್ಕೊಂದು ಚಿಕಿತ್ಸೆಯಾಗಿ ಹೊಸ ಆಶಾಕಿರಣವಾಗಿ ಕಂಡರೆ ಅಚ್ಚರಿಯಲ್ಲ. ಯಾವುದೇ ವಿಶೇಷ ಸೌಕರ್ಯಗಳಿಲ್ಲದ ಹಳ್ಳಿಗಾಡಿನ ಪ್ರದೇಶದಲ್ಲಿ ಇಂತಹ ಸಾಧ್ಯತೆ ತೆರೆದುಕೊಂಡ ಹಿಂದೆ ಇದ್ದ ಅನೇಕ ದಿನಗಳ ಚಿಂತನೆ ಪ್ರಯತ್ನ, ಕೆಲಸ, ಶ್ರಮ, ಹಾಗೂ ಪ್ರೀತಿ ಈ ಸಮ್ಮೇಳನ ಅಂಗಳದಲ್ಲಿ ಹರಡಿದ ಬೆಳದಿಂಗಳಲ್ಲಿ ಎದ್ದು ಕಾಣುತ್ತಿತ್ತು. ಮುಖ್ಯ ರಸ್ತೆಯಿಂದ ಸಮ್ಮೇಳನ ಅಂಗಣಕ್ಕೆ ಪಥದರ್ಶನದಿಂದ ಆರಂಭಿಸಿ ವೇದಿಕೆ ಸಮ್ಮೇಳನ ಅಂಗಣಕ್ಕೆ ಗ್ರಾಮೀಣ ಸೊಗಡಿನ ಶೃಂಗಾರ, ಅಲಂಕಾರ, ಆಸನ ವ್ಯವಸ್ಥೆ, ಆರೋಗಣೆ ಸಹಿತ ಪ್ರತಿಯೊಂದು ಅಚ್ಚುಕಟ್ಟಾಗಿದ್ದರೆ ಕಾರ್ಯಕ್ರಮ ಸಂಯೋಜನೆ, ಸಮಯದ ನಿರ್ದಿಷ್ಟತೆ, ಸಮಯ ಪಾಲನೆ, ನಿಬಿಡ ಕಾರ್ಯಕ್ರಮಗಳ ನಿರ್ವಹಣೆಯಲ್ಲೂ ಅದೇ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು.
ನಗರ ಪ್ರದೇಶದ ಗೊಂದಲಗಳಿಂದ ದೂರವಾದ ಗಿಡಮರಗಳ ವನಸಿರಿಯ ಅಚ್ಚಾದನೆಯ ಬದಲು ಇದಕ್ಕೆ ಪೂರಕವೆನಿಸಿದ ಗ್ರಾಮೀಣ ಸೊಗಡಿನ ಅಲಂಕಾರ, ಶಾಂತ ಪ್ರಕಾಶದ ಬೆಳದಿಂಗಳು ಚೆಲ್ಲಿದ ಬಟ್ಟ ಬಯಲು ಸಮ್ಮೇಳನಕ್ಕೆ ಹೇಳಿ ಮಾಡಿಸಿದ ಜಾಗದಂತಿತ್ತು. ಭಾವೈಕ್ಯದ ಸಂಕೇತದ ಗ್ರಾಮೀಣ ಭಾಗದ ಜನರ ಶ್ರದ್ಧಾ ಕೇಂದ್ರವೆನಿಸಿದ ಬೊಬ್ಬರ್ಯ ಸ್ಥಾನದ ಹಿನ್ನಲೆಯಲ್ಲಿ ಆಯ್ದುಕೊಂಡ ಸ್ಥಳದಲ್ಲಿ ಬಯಲು ಸಭಾಂಗಣಕ್ಕೆ ಸಾಮಾಜಿಕ ಕಾರ್ಯಕರ್ತರಾಗಿದ್ದು ಕೀರ್ತಿ ಶೇಷರಾದ ಸ್ಥಳೀಯ ಮಹಿಳೆಯರಾದ ಜಾನಮ್ಮ-ಮುತ್ತಮ್ಮ ಹಾಗೂ ಸೋಮಯ್ಯ ಜೊತೆಗೆ ಕೀರ್ತಿಶೇಷರಾದ ಎಸ್. ಲೋಕು ಶೆಟ್ಟಿಯವರ ಹೆಸರು ವೇದಿಕೆಗೆ ಇಟ್ಟಿರುವುದು (ನಾಡಿಗಾಗಿ ಕೆಲಸ ಮಾಡಿದವರನ್ನು ಸ್ಮರಿಸುವ ರೂಪದಲ್ಲಿ) ಮುಂತಾದ ವೈಶಿಷ್ಟ್ಯಗಳೊಂದಿಗೆ ಆದರ್ಶವಾಗಿತ್ತು.
ಕುರ್ಪಾಡಿ ಯುವ ವೃಂದ ಲಾಂಛನದಡಿ ೯ ವರ್ಷಗಳ ಹಿಂದೆ ಆರಂಭಿಸಲಾದ 'ಗ್ರಾಮೋತ್ಸವ' ಚಿಂತನೆಯ ವೃಕ್ಷ ಇದೀಗ ೧೦ನೇ ವರ್ಷಕ್ಕೆ ಸಾಹಿತ್ಯ ಸಮ್ಮೇಳನದ ರೂಪದಲ್ಲಿ ಹೂಬಿಟ್ಟಿದ್ದು ಸಂಘಟಕರ ಮುಖದಲ್ಲಿ ಸಂತೃಪ್ತಿಯ ಲಾಸ್ಯ ಹರಡಿದೆ. ಕೃತಾರ್ಥತೆಯ ಖುಷಿ ನೀಡಿದೆ. ತಮ್ಮ ಈ ಕೆಲಸಕ್ಕೆ, ಪ್ರಯತ್ನಕ್ಕೆ ಹತ್ತು ವಷಗಳಿಂದ ನಿರಂತರವಾಗಿ ಕೈ ಜೋಡಿಸಿದವರನ್ನು ಸ್ಮರಿಸುವ ಸಂಘಟಕ ಶೇಖರ ಅಜೆಕಾರು ಮತ್ತು ಡಾ| ಸಂತೋಷ ಕುಮಾರ್ ಶೆಟ್ಟಿ ಈ ಬಾರಿಯ ಬೆಳದಿಂಗಳ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಿದ ಸಾಹಿತ್ಯಾಸಕ್ತರನ್ನು ಹಾಗೂ ತಮ್ಮ ಜೊತೆ ವಿಶೇಷವಾಗಿ ಬೆಂಬಲಕ್ಕೆ ನಿಂತ ಲಕ್ಷ್ಮೀಶ ಶೆಟ್ಟಿ ಅಜೆಕಾರು, ದಿನೇಶ ದೇವಾಡಿಗ ಮೂಡುಬಿದ್ರೆ ಅವರನ್ನು ನೆನಪಿಸಿಕೊಳ್ಳುತ್ತಾರೆ. ಕುರ್ಪಾಡಿಯ ಸಾಹಿತ್ಯಾಸಕ್ತ ಕೂಟ ಕಳೆದ ೧೦ ವರ್ಷಗಳಲ್ಲಿ ೧೫ ಸಂಘ ಸಂಸ್ಥೆಗಳನ್ನು ೩೫ ಮಂದಿ ಸಾಧಕರನ್ನು, ಪ್ರತಿಭಾವಂತರನ್ನು ಗುರುತಿಸಿ 'ಗೌರವ' ನೀಡಿ ಸನ್ಮಾನಿಸಿದೆ.
ಕಾರ್ಕಳದಲ್ಲಿ ನಿರಂತರವಾಗಿ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಕಾರ್ಕಳ ಸಾಹಿತ್ಯ ಸಂಘ ಹಾಗೂ ಮಿತ್ರ ಮಂಡಲಿ ಕೋಟ ಎಂಬೆರಡು ಸಂಸ್ಥೆಗಳನ್ನು ಪ್ರಥಮ ಬೆಳದಿಂಗಳ ಸಮ್ಮೇಳನದಲ್ಲಿ ಗುರುತಿಸಿ ಗೌರವಿಸಲಾಗಿದೆ.
ಉದ್ಘಾಟನೆ ನೆರವೇರಿಸಿದ್ದು ಹರಿಕೃಷ್ಣ ಪುನರೂರು, ಅಧಕ್ಶತೆ ಶಾಸಕ ಎಚ್. ಗೋಪಾಲ ಭಂಡಾರಿ, ಕ.ರಾ.ವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಪ್ರೊ| ಪದ್ಮನಾಭ ಗೌಡ, ಕೋ. ರಮಾನಂದ ಕಾಮತ್, ಫಾ| ವಲೇರಿಯನ್ ಫೆರ್ನಾಂಡಿಸ್, ಡಾ| ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದವರು ತುಳು ಲೇಖಕಿ ಜಯಂತಿ ಎಸ್. ಬಂಗೇರ. ಉಪನ್ಯಾಸಕಿಯರಾದ ಶ್ರೀ ಮುದ್ರಾಡಿ-'ಮಹಿಳೆಯರ ಸವಾಲುಗಳು' ಮತ್ತು ಸುಲತಾ ವಿದ್ಯಾಧರ್ ಮಹಿಳೆ ಮತ್ತು ಜಾನಪದ ಕುರಿತು ಪ್ರಬಂಧ ಮಂಡಿಸಿದರು. ಪ್ರೊ| ಮಿತ್ರ ಪ್ರಭಾ ಹೆಗ್ಡೆ, ಮಾಲತಿ ಪೈ ಅತಿಥಿಗಳು.
ಸಂಶೋಧಕ ಡಾ| ವಾಮನ ನಂದಾವರ ಅಧ್ಯಕ್ಷತೆ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಗೋಕುಲದಾಸ್ ಪೈ, ಹೇಮನಾಥ ಪಡುಬಿದ್ರಿ ಉಪಸ್ಥಿತಿಯಲ್ಲಿ ಸಾಧಕರಿಗೆ 'ರತ್ನ' ಗೌರವವನ್ನು ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ವಿತರಿಸಿದರು. ಡಾ| ಎಚ್. ಶಾಂತಾರಾಮ್ -ಶಿಕ್ಷಣ ರತ್ನ, ಅಂಬಾತನಯ ಮುದ್ರಾಡಿ- 'ಸಾಹಿತ್ಯ ರತ್ನ', ಕೋಚ ಪಾಣಾರ-'ಜಾನಪದ ಕಲಾ ರತ್ನ', ಡಾ| ವಸಂತ ಕುಮಾರ್ ಪೆರ್ಲ-'ಮಾಧ್ಯಮ ರತ್ನ', ಶಿವರಾಮ ಕಾಸರಗೋಡು 'ಹೊರನಾಡ ಕನ್ನಡ ರತ್ನ', ಕೆ.ಜೆ. ಗಣೇಶ್ 'ಯಕ್ಷ ಸಂಗೀತ ರತ್ನ', ಜ್ಯೋತಿ ಗುರುಪ್ರಸಾದ್ 'ಕಾವ್ಯರತ್ನ' ಗೌರವ ಪ್ರದಾನಿಸಲಾಯಿತು. 'ಮಾಧ್ಯಮರತ್ನ' - ಚಿದಂಬರ ಬೈಕಂಪಾಡಿ, 'ಉದ್ಯಮ ರತ್ನ' - ಪ್ರಮೋದ್ ಮಧ್ವರಾಜ್, ಉಪ್ಪುಂದ ಚಂದ್ರಶೇಖರ ಹೊಳ್ಳ - 'ಸಂಘಟನಾ ರತ್ನ' ಗೌರವ ಸ್ವೀಕರಿಸಲು ಉಪಸ್ಥಿತರಿರಲಿಲ್ಲ.
ಉಡುಪಿ ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರ ಸಂಘದ 'ಸುದ್ದಿ ಛಾಯಾಚಿತ್ರ ಪ್ರದರ್ಶನ' ಸಮ್ಮೇಳನದ ಪ್ರಧಾನ ಆಕರ್ಷಣೆಯಾಗಿತ್ತು.ಡಾ| ವಸಂತ ಕುಮಾರ್ ಪೆರ್ಲ ಅಧ್ಯಕ್ಷತೆಯಲ್ಲಿ ಧನಂಜಯ ಮೂಡುಬಿದಿರೆ, ಸದಾನಂದ ನಾರಾವಿ, ರಮಾನಂದ ಅಜೆಕಾರು, ಅರುಣ ಹೆಬ್ರಿ, ರತ್ನಾಕರ ಪ್ರಭು ರೆಂಜಾಳ ಕವಿಗೋಷ್ಠಿ ನಡೆಸಿಕೊಟ್ಟರು.
ಕೋ.ರಮಾನಂದ ಕಾಮತ್, ಅರುಣ್ ಕುಮಾರ್ ಶಿರೂರು ನಡುರಾತ್ರಿಯಲ್ಲೂ ಹಾಸ್ಯಗೋಷ್ಠಿಯಲ್ಲಿ ಮಿಂಚಿದರು. ಶೇಖರ ಅಜೆಕಾರು ನಿರ್ದೇಶನದಲ್ಲಿ ಯಕ್ಷ ಸಂಗೀತ-ಕೆ.ಜೆ. ಗಣೇಶ್ - ಎ.ಪಿ. ಪಾಠಕ್ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು.
ಪ್ರಕಾಶ್ ಕಾಬೆಟ್ಟು ನಿರ್ದೇಶನದ ಕನ್ನಡ ಸಿನಿಮಾ 'ಗಾಜಿನ ಗೋಪುರ' ಬಿಡುಗಡೆಯಾಯಿತು.'ಗ್ರಾಮ ಗೌರವ' ಸ್ಮರಣ ಸಂಚಿಕೆ, ಮತ್ತು ಪುಸ್ತಕಗಳ ಬಿಡುಗಡೆಯಾಯಿತು. ಹವ್ಯಾಸಿ ಕಲಾ ತಂಡ 'ಯಕ್ಷಜ್ಯೋತಿ ಕಲಾಮಂಡಳಿ' ಪರ್ಕಳ ಇವರು ಮೌನೇಶ್ ಕಮ್ಮಾರರ ನೇತೃತ್ವದಲ್ಲಿ ನಡೆಸಿದ "ವಾಮನ ಚರಿತ್ರೆ" ಮುಂಜಾವಿಗೆ ಹೊಸ ಸಾಹಿತ್ಯಕ್ಕೆ ಕಳೆ ನೀಡಿತು.

Twitter Facebook Delicious Digg Favorites More

 
Twitter Facebook Delicious Digg Favorites More