ಫೆ. ೯ ರಿಂದ ಫೆ. ೧೦ ರವರೆಗೆ ಅಜೆಕಾರಿನಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ

ಫೆ. ೯ ರಿಂದ ಫೆ. ೧೦ ರವರೆಗೆ ಅಜೆಕಾರಿನಲ್ಲಿ
ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಅಜೆಕಾರು: ಕುರ್ಪಾಡಿ ಯುವವೃಂದ ಮತ್ತು ಸರ್ವರ ಸಹಕಾರದೊಂದಿಗೆ ೧೦ನೇ ಗ್ರಾಮೋತ್ಸವದ ಸಂಭ್ರಮಕ್ಕಾಗಿ ಆಯೋಜಿಸುತ್ತಿರುವ ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಫೆ. ೯ ರ ಸಂಜೆ ೬.೦೦ ರಿಂದ ಫೆ. ೧೦ ರ ಮುಂಜಾವಿನ ೬.೦೦ವರೆಗೆ ಅಜೆಕಾರು ಕುರ್ಪಾಡಿಯ ಬೊಬ್ಬರ್ಯಸ್ಥಾನದ ಬಳಿ ನಡೆಯಲಿದೆ.
ಸಜ್ಜನ, ಸಮಾಜ ಸೇವಕ ಎಸ್.ಲೋಕು ಶೆಟ್ಟಿ ಅವರ ಹೆಸರನ್ನು ವೇದಿಕೆಗೆ, ಆವರಣಕ್ಕೆ ಜಾನಮ್ಮ-ಸೋಮಯ್ಯ-ಮುತ್ತಮ್ಮ ಎಂದು ಹೆಸರಿಡಲಾಗಿದೆ. ಇಡೀ ರಾತ್ರಿ ಸಾಹಿತ್ಯ ಸಮ್ಮೇಳನದ ಪೂರ್ಣ ಸ್ವರೂಪದೊಂದಿಗೆ ಹುಣ್ಣಿಮೆ-ಕೆಡ್ಡೆಸದ ದಿನದಂದು ಅಂಗಡಿ ಮಟ್ಟುಗಳೇ ಇಲ್ಲದ ಪ್ರಾಕೃತಿಕ ಪರಿಸರದಲ್ಲಿ ನಡೆಯುವ ಸಮ್ಮೇಳನ ಖ್ಯಾತ ಸಾಹಿತ ಎಚ್. ಡುಂಡಿರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಂಜೆ ಆರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದು, ಕಾರ್ಕಳ ಶಾಸಕ ಎಚ್. ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸುವರು.
ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕ.ಸಾ.ಪ. ಕಾರ್ಕಳ ಘಟಕದ ಪ್ರೊ| ಪದ್ಮನಾಭ ಗೌಡ, ಉಡುಪಿ ಘಟಕದ ಗಣನಾಥ ಎಕ್ಕಾರು, ಕುಂದಾಪುರ ಘಟಕದ ಕೊ.ರಮಾನಂದ ಕಾಮತ್, ಸಮ್ಮೇಳನ ಸಮಿತಿ ಅಧ್ಯಕ್ಷ ಡಾ| ಸಂತೋಷ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು.
ಮಹಿಳಾ ಗೋಷ್ಠಿಯು ಕರ್ನಾಟಕ ತುಳು ಅಕಾಡೆಮಿ ಮಾಜಿ ಸದಸ್ಯೆ ಜಯಂತಿ ಎಸ್. ಬಂಗೇರರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಎಸ್.ವಿ.ಟಿ. ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಮಿತ್ರಪ್ರಭಾ ಹೆಗ್ಡೆ ಮುಖ್ಯ ಅತಿಥಿಗಳಾಗಿರುವರು. ಉಪನ್ಯಾಸಕಿಯರಾದ ಶ್ರೀ ಮುದ್ರಾಡಿ ಮಹಿಳೆಯರ ಸವಾಲುಗಳು ಮತ್ತು ಸುಲತಾ ವಿದ್ಯಾಧರ್ ಮಹಿಳೆ ಮತ್ತು ಜಾನಪz ಕುರಿತು ವಿಚಾರಗಳನ್ನು ಮಂಡಿಸಲಿರುವರು.
ನಡುರಾತ್ರಿ ಡಾ| ವಸಂತ ಕುಮಾರ್ ಪೆರ್ಲ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಧನಂಜಯ ಮೂಡುಬಿದಿರೆ, ಸದಾನಂದ ನಾರಾವಿ, ರಮಾನಂದ ಅಜೆಕಾರು, ಧನಂಜಯ ಗುರುಪುರ, ಅರುಣಾ ಹೆಬ್ರಿ, ಅಶ್ವಿನಿ ಸನಿಲ್ ಭಾಗವಹಿಸಲಿರುವರು.
ಟಿವಿ ವಾಹಿನಿ ಕಲಾವಿದರಾದ ಕೋ. ರಮಾನಂದ ಕಾಮತ್, ಅರುಣ್ ಕುಮಾರ್ ಶಿರೂರು ಅವರು ಹಾಸ್ಯಗೋಷ್ಠಿಯಲ್ಲಿ ಹಾಸ್ಯದ ಹೊನಲು ಹರಿಸಲಿದ್ದಾರೆ. ಜಾನಪದ ಅರಿವು ಗೋಷ್ಠಿಯಲ್ಲಿ ಪತ್ರಕರ್ತರಾದ ಪದ್ಮಾಕರ್ ಭಟ್, ಬೊಬ್ಬರ್ಯ ಮತ್ತು ಸಾಮರಸ್ಯ ಕುರಿತು ತುಳುವರ ಕೆಡ್ಡೆಸದ ಬಗ್ಗೆ ಶ್ರೀಕರ ಭಟ್ ವಿಷಯ ಮಂಡಿಸಲಿರುವರು. ಬಿ.ಸಿ. ರಾವ್ ಶಿವಪುರ ಮುಖ್ಯ ಅತಿಥಿಗಳಾಗಿರುವರು.
ಕರ್ನಾಟಕ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ವಾಮನ ನಂದಾವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಮತ್ತು ಡಾ| ಎಂ. ಮೋಹನ ಆಳ್ವ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವರು.
ಭಾರತ ಸೇವಾ ದಳದ ಉಡುಪಿ ಜಿಲ್ಲಾಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಗೋಕುಲ್‌ದಾಸ್ ಪೈ, ಪತ್ರಿಕಾ ಛಾಯಾಗ್ರಾಹಕರ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಹೇಮನಾಥ ಪಡುಬಿದ್ರಿ ಮುಖ್ಯ ಅತಿಥಿಗಳಾಗಿರುವರು.
ಸಾಧಕ ಶ್ರೇಷ್ಠರಿಗೆ ಗೌರವ : ಮೊದಲ ಅ.ಕ. ಬೆಳದಿಂಗಳ ಸಾಹಿತ್ಯ ಸಮ್ಮೇಳನವು ಡಾ| ಎಚ್. ಶಾಂತಾರಾಮ್ ಅವರಿಗೆ ಶಿಕ್ಷಣ ರತ್ನ, ಅಂಬಾತನಯ ಮುದ್ರಾಡಿ ಅವರಿಗೆ ಸಾಹಿತ್ಯ ರತ್ನ, ಉಪ್ಪುಂದ ಚಂದ್ರಶೇಖರ ಹೊಳ್ಳ ಅವರಿಗೆ ಸಂಘಟನಾ ರತ್ನ, ಕೋಚಪಾಣಾರ ಅವರಿಗೆ ಜಾನಪದ ಕಲಾರತ್ನ, ಡಾ| ವಸಂತ ಕುಮಾರ್ ಪೆರ್ಲ ಮತ್ತು ಚಿದಂಬರ ಬೈಕಂಪಾಡಿಯವರಿಗೆ ಮಾಧ್ಯಮ ರತ್ನ, ಶಿವರಾಮ ಕಾಸರಗೋಡು ಅವರಿಗೆ ಹೊರನಾಡ ಕನ್ನಡ ರತ್ನ, ಪ್ರಮೋದ ಮಧ್ವರಾಜ್ ಅವರಿಗೆ ಉದ್ಯಮ ರತ್ನ, ಕೆ.ಜೆ. ಗಣೇಶ್ ಅವರಿಗೆ ಯಕ್ಷ ಸಂಗೀತ ರತ್ನ ಜ್ಯೋತಿ ಗುರುಪ್ರಸಾದ್ ಅವರಿಗೆ ಕಾವ್ಯ ರತ್ನ ಗೌರವವನ್ನು ನೀಡಲಿದೆ. ಸಾಹಿತ್ಯ ಸಂಘಟನೆಗಾಗಿ ಕಾರ್ಕಳದ ಸಾಹಿತ್ಯ ಸಂಘ ಮತ್ತು ಸಾಲಿಗ್ರಾಮದ ಗೆಳೆಯರ ಬಳಗ ಸಂಘ ರತ್ನ ಗೌರವವನ್ನು ನೀಡಲಾಗುತ್ತಿದೆ. ನಿರ್ಮಲ ಗ್ರಾಮ ಪ್ರಶಸ್ತಿಗಾಗಿ ಪಂಚಾಯತ್‌ಗೆ ಸಾಧನೆ ಗೌರವ ಕೊಡಲಾಗುತ್ತಿದೆ.
ಹೊಸ ಚಲನಚಿತ್ರ ಬಿಡುಗಡೆ: ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರ ಬಿಡುಗಡೆಯಾಗಲಿದ್ದು ಉದ್ಯಮಿಗಳಾದ ಶಿವಕುಮಾರ್ ಮತ್ತು ವಿಜಯಶೆಟ್ಟಿ ಮೊದಲ ಪ್ರದರ್ಶನಕ್ಕೆ ಚಾಲನೆ ನೀಡುವರು. ಗಾಜಿನ ಗೋಪುರ ಸಿನಿಮಾದ ನಿರ್ದೇಶನ, ನಿರ್ಮಾಣ, ಸಂಕಲನ, ಗ್ರಾಫಿಕ್ಸ್ - ಪ್ರಕಾಶ್ ಕಾಬೆಟ್ಟು, ಕ್ಯಾಮರಾ-ದೀಪಕ್ ಶೆಟ್ಟಿ, ಸಂಗೀತ-ರಾಜೇಶ್ ಭಟ್ ಟ್ಯಾಲೆಂಟ್ಸ್ ಮೂಡುಬಿದಿರೆ, ಸಂಭಾಷಣೆ: ರತ್ನಾಪ್ರಕಾಶ್.
ಹಾಸ್ಯಗೋಷ್ಠಿ: ಟಿ.ವಿ. ಕಲಾವಿದರಾದ ಕೋ. ರಮಾನಂದ ಕಾಮತ್ ಮತ್ತು ಅರುಣ್ ಕುಮಾರ್ ಶಿರೂರು ಅವರು ಹಾಸ್ಯಗೋಷ್ಠಿಯಲ್ಲಿ ಹಾಸ್ಯದ ಹೊನಲು ಹರಿಸಲಿದ್ದಾರೆ.
ಪುಸ್ತಕ ಬಿಡುಗಡೆ-ಪ್ರದರ್ಶನ-ಮಾರಾಟ : ಡಾ| ಬಿ. ಜನಾರ್ಧನ್ ಭಟ್ ಅವರ ಪೀಟರ್ ಫ್ಯಾನ್, ಜಿ.ವಿ. ಶರ್ಮ ಅವರ ದೈವದರ್ಶನ, ರಾಜಾ ಚೆಂಡೂರು ಅವರ ಸ್ಟೂಡೆಂಟ್ಸ್ ಮೈಂಡ್ ಪವರ್, ಕೆ. ರವಿಚಂದ್ರರಾವ್ ಅವರ ವಿದ್ಯಾರ್ಥಿಗಳಿಗಾಗಿ ನುಡಿಮುತ್ತು, ಜಗನ್ನಾಥ ರಾವ್ ಬಹುಳೆ ಅವರ ರಾಜಾಯಣ ಈ ಐದು ಸಾಧನಾ ಪ್ರಕಾಶನದ ಪುಸ್ತಕಗಳ ಬಿಡುಗಡೆಯಾಗಲಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟ ಪುತ್ತೂರಿನ ಪ್ರಕಾಶ್ ಸಂಯೋಜನೆಯಲ್ಲಿ ನಡೆಯಲಿದೆ.
ಛಾಯಾಚಿತ್ರ ಪ್ರದರ್ಶನ : ಈಗಾಗಲೇ ಜನಮನಸೂರೆಗೊಂಡಿರುವ ಪತ್ರಿಕಾ ಛಾಯಾಚಿತ್ರಗ್ರಾಹಕರು ಸೆರೆ ಹಿಡಿದಿರುವ ಶ್ರೇಷ್ಠ ಛಾಯಾಚಿತ್ರಗಳ ಪ್ರದರ್ಶನ ಉಡುಪಿ ಜಿಲ್ಲಾ ಪತ್ರಿಕಾ ಛಾಯಾಗ್ರಾಹಕರ ಸಂಘದ ಸಂಯೋಜನೆಯಲ್ಲಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಫೆ. ೯ ರ ಸಂಜೆ ೫.೦೦ ರಿಂದ ೬.೦೦ ಮತ್ತು ಗೋಷ್ಠಿಗಳ ನಡುವೆ ಗೀತೆ, ನೃತ್ಯ, ವೈವಿಧ್ಯ ಕಾರ್ಯಕ್ರಮ. ಫೆ. ೧೦ ರ ಮುಂಜಾವಿಗೆ ರಾಜ್ಯಾದ್ಯಂತ ಮಿಂಚಿರುವ ಹೊಸ ಸಂಗೀತ ಪ್ರಯೋಗ ಖ್ಯಾತ ಕವಿಗಳ ಕನ್ನಡ ಗೀತೆಗಳ ಯಕ್ಷ ಸಂಗೀತ ಶೇಖರ ಅಜೆಕಾರು ಅವರ ಪರಿಕಲ್ಪನೆ-ನಿರ್ದೇಶನ-ನಿರೂಪಣೆಯೊಂದಿಗೆ ನಡೆಯಲಿದೆ. ಭಾಗವತರು: ಕೆ.ಜೆ. ಗಣೇಶ್ ಮತ್ತು ಮದ್ದಳೆ: ಎ.ಪಿ. ಪಾಟಕ್, ಯಕ್ಷಜ್ಯೋತಿ ಕಲಾಮಂಡಳಿ ಪರ್ಕಳ ಇವರಿಂದ ಪೌರಾಣಿಕ ಪ್ರಸಂಗದ ತಾಳಮದ್ದಳೆ ನಡೆಯಲಿದೆ.
ಸ್ಮರಣ ಸಂಚಿಕೆ: ಗ್ರಾಮ ಗೌರವ ಹೆಸರಿನ ಸ್ಮರಣ ಸಂಚಿಕೆಯನ್ನು ಶೇಖರ ಅಜೆಕಾರು ಸಂಪಾದಕತ್ವದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಳಿಗಾಗಿ ಸಮಿತಿಯ ಅಧ್ಯಕ್ಷ ಡಾ| ಸಂತೋಷ ಕುಮಾರ್ ಶೆಟ್ಟಿ ಅಥವಾ ಸಂಯೋಜಕ ಶೇಖರ ಅಜೆಕಾರು ಅವರನ್ನು 9342 484053,9342 837 207 ವಿ.ಅಂಚೆ -tuluva@gmail.com, www.ajekar.blogspot.com

Twitter Facebook Delicious Digg Favorites More

 
Twitter Facebook Delicious Digg Favorites More