ಡುಂಡಿರಾಜ್ ಪರಿಚಯ

ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಅಧ್ಯಕ್ಷರಾಗಿ ಎಚ್. ಡುಂಡಿರಾಜ್ ಆಯ್ಕೆ

ಅಜೆಕಾರು: ಗ್ರಾಮೋತ್ಸವದ ದಶಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಪ್ರಥಮ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಸಾಹಿತಿ, ಚುಟುಕು ಸಾರ್ವಭೌಮ - ಚುಟುಕು ರತ್ನ ಖ್ಯಾತಿಯ ಎಚ್. ಡುಂಡಿರಾಜ್ ಅವರು ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷ, ಜಿ.ಪಂ.ಸದಸ್ಯ, ಡಾ| ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಕುರ್ಪಾಡಿ ಯುವ ವೃಂದ ಹೆಸರಿನ ಯುವಕರ ಕೂಟ ಜಾತಿ-ಮತ-ಬೇಧ ಮರೆತು ನಾವೆಲ್ಲರು ಒಂದು ಎಂಬ ಧ್ಯೇಯದೊಂದಿಗೆ ೯ ಗ್ರಾಮೋತ್ಸವಗಳನ್ನು ನಡೆಸಿದೆ. ಸುತ್ತಮುತ್ತಲಿನ ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸಿದೆ, ಪ್ರತಿಭಾನ್ವಿತರನ್ನು ಗೌರವಿಸಿದೆ.

ಅಧ್ಯಕ್ಷರ ಪರಿಚಯ : ಹನಿಗವನ, ಚುಟುಕು ಕವಿತೆಗಳಲ್ಲಿ ತಮ್ಮ ವಿಶಿಷ್ಟತೆಯನ್ನು ಮೆರೆದಿರುವ ಎಚ್. ಡುಂಡಿರಾಜ್ ಹನಿಗವನಗಳ ರಾಜ ಎಂದೇ ಪ್ರಸಿದ್ಧರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಕುದ್ರು ಎಂಬ ಹಳ್ಳಿಯಲ್ಲಿ ೧೯೫೬ ರ ಆಗಸ್ಟ್ ೧೮ರಂದು ಜನಿಸಿದರು. ಮಂಗಳೂರಿನಲ್ಲಿರುವ ಕಾರ್ಪೊರೇಶನ್ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಮುಖ್ಯ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕವಿ, ನಾಟಕಕಾರ, ಅಂಕಣಕಾರ ಹಾಗೂ ರಂಗಕಲಾವಿದರಾಗಿ ಜನಮನ್ನಣೆ ಗಳಿಸಿದ್ದಾರೆ.

ಸಹಜವಾಗಿ ಬರೆದರೆ ಕಾವ್ಯಮಯ
ಒತ್ತಾಯಕ್ಕೆ ಬರೆದರೆ ಕಾವ್ಯ-ಮಾಯ! ಎಂಬ ಧೋರಣೆಯಿಂದ ಪದ್ಯ ಹಾಗೂ ಗದ್ಯ ಎರಡರಲ್ಲೂ ಕೃಷಿ ಮಾಡಿರುವ ಇವರ ೩೦ ಕೃತಿಗಳು ಪ್ರಕಟವಾಗಿವೆ. ಹಲವು ಕೃತಿಗಳು ಮರು ಮುದ್ರಣಗೊಂಡಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾದ ಪುಸ್ತಕಗಳ ಯಾದಿಯಲ್ಲಿ ಸೇರಿವೆ. ಉತ್ತಮವಾಗ್ಮಿಯಾಗಿರುವ ಡುಂಡಿರಾಜರ ಹನಿಗವನ, ಹಾಸ್ಯಕವನ ಹಾಗೂ ಭಾವಗೀತೆಗಳ ಧ್ವನಿಸುರುಳಿ, ಸಿ.ಡಿ, ವಿಸಿಡಿಗಳು ಹೊರಬಂದಿವೆ.

ಕಿರುಗವನಗಳ ಅಂಥಾಲಜಿ-ಸೂಜಿಮಲ್ಲಿಗೆ (೧೯೯೮) ಇವರ ಸಂಪಾದಿತ ಕೃತಿ. ವಿಜಯ ಕರ್ನಾಟಕ ದಲ್ಲಿ ಪ್ರಕಟವಾಗುತ್ತಿದ್ದ (ಮಂಗಳವಾರ) ಮಾತು-ಕ(ವಿ)ತೆ ಅಂಕಣ ಅತ್ಯಂತ ಜನಪ್ರಿಯವಾಗಿತ್ತು.

ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಅಖಿಲ ಭಾರತ ಬಾನುಲಿ ನಾಟಕ ರಚನಾ ಸ್ಪರ್ಧೆಯಲ್ಲಿ ಅತ್ಯುತ್ತಮ ಹಾಸ್ಯನಾಟಕ ಪುರಸ್ಕಾರ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹನಿಗವನ ಹಾಗೂ ಚುಟುಕುಗೋಷ್ಠಿಗಳ ಅಧ್ಯಕ್ಷತೆಯ ಗೌರವ ಸಂದಿದೆ. ಆರ್ಯಭಟ ಪ್ರಶಸ್ತಿ, ಚುಟುಕು ಸಾರ್ವಭೌಮ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಕುಂದಪ್ರಭ ಕೋ.ಮ. ಕಾರಂತ ಪುರಸ್ಕಾರ, ವಿಶ್ವೇಶ್ವರಯ್ಯ ಪ್ರಶಸ್ತಿ, ಭಾರ್ಗವ ಪ್ರಶಸ್ತಿಗಳು ಇವರಿಗೆ ಸಂದಿವೆ. ಮೂರು ವರ್ಷಗಳ ಕಾಲ ಅವರು ಅಜೆಕಾರು ಕಾರ್ಪೊರೇಶನ್ ಬ್ಯಾಂಕಿನ ಶಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಎಚ್. ಡುಂಡಿರಾಜ್ ಕೃತಿಗಳು


ಕವನ ಸಂಕಲನಗಳು :

ನಮ್ಮ ಗೋಡೆಯ ಹಾಡು(೧೯೮೨), ನೀನಿಲ್ಲದೆ (೧೯೮೬), ನನ್ನ ಕವಿತೆ ನನ್ನ ಹಾಗೆ (೧೯೯೨), ಆಯದ ಕವನಗಳು (೧೯೯೮), ಏನಾಯಿತು (೨೦೦೦), ಅಕ್ಷತಾ-ಲಕ್ಷತಾ (೨೦೦೪), ಬನ್ನಿ ನಮ್ಮ ಹಾಡಿಗೆ (೨೦೦೪) (ಗೀತೆಗಳು)

ಹನಿಗವನ ಸಂಗ್ರಹಗಳು :

ಪಾಡ್ಯ ಬಿದಿಗೆ ತದಿಗೆ (೧೯೮೫), ನೂರು ಹನಿಗವನಗಳು (೧೯೯೨), ಇನ್ನೂರು ಇನಿಗವನಗಳು(೧೯೯೫), ನವನೀತ (೧೯೯೧), ಪಂಚ್-ಕ-ಜಾಯ್(೧೯೯೭), ಹನಿಕೇತನ (೧೯೯೯), ಅಳಿಲುಸೇವೆ (೨೦೦೦), ಹನಿಖಜಾನೆ (೨೦೦೭) (ಸಮಗ್ರ ಹನಿಗವನಗಳು)

ನಾಟಕಗಳು :-

ಓಡುವವರು (೧೯೮೧), ಹುಡುಕಾಟ (೧೯೮೫), ಅಧ್ವಾನಪುರ (೧೯೮೯), ಕೊರಿಯಪ್ಪನ ಕೊರಿಯೋಗ್ರಫಿ (ಎರಡು ನಾಟಕಗಳು (೧೯೯೧), ಅಜ್ಜಿಕತೆ (ಮಕ್ಕಳ ನಾಟಕ) (೧೯೯೪), ಸಿಮಿಮಹಾತ್ಮೆ (ಮೂರು ನಾಟಕಗಳು) (೧೯೯೬), ಕಾಯೋಕಲ್ಪ (೨೦೦೩), ಇಪ್ಪತ್ತೊಂದರ ಶತಮಾನ (೨೦೦೩), ಮಗು ಕಳೆದು ಹೋಗಿದೆ (೨೦೦೬)

ಗದ್ಯ:-

ಯಾರಿಗೂ ಹೇಳ್ಬೇಡಿ (೨೦೦೦), ಮಾತು ಕವಿತೆ (೨೦೦೫) (ಅಂಕಣ ಬರಹ), ಮತ್ತಷ್ಟು ಮಾತು ಕವಿತೆ (೨೦೦೬) (ಅಂಕಣ ಬರಹ), ಪರವಾಗಿಲ್ಲ (೨೦೦೭) (ಲಲಿತ ಪ್ರಬಂಧಗಳು), ಬಾರಯ್ಯ ಲಂಬೋದರ (ಲೇಖನಗಳು), ಟೈಮಿಲ್ಲಾ ಸಾರ್ ಟೈಮಿಲ್ಲ (ಲೇಖನಗಳು)

ಸಂಪಾದಿತ ಕೃತಿ :-

ಸೂಜಿ ಮಲ್ಲಿಗೆ (ಕಿರುಗವನಗಳ ಅಂಥಾಲಜಿ-೧೯೯೮)



ವಿಳಾಸ: ಶೇಖರ ಅಜೆಕಾರು, ಸಂಯೋಜಕರು ಅ.ಕ.ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕುರ್ಪಾಡಿ ಅಜೆಕಾರು-೫೭೪೧೦೧

Twitter Facebook Delicious Digg Favorites More

 
Twitter Facebook Delicious Digg Favorites More