ಏಕಲವ್ಯ ಪ್ರಶಸ್ತಿ ಪ್ರಕಟ; ಮಮತಾಗೆ ಮುಕುಟ

ಮಡಿಕೇರಿ : ಕ್ರೀಡಾಕ್ಷೇತ್ರದ ಗಣನೀಯ ಸಾಧಕರಿಗೆ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರಸಕ್ತ ಸಾಲಿನ 15 ಹಾಗೂ 2010ನೇ ಸಾಲಿನ ನಾಲ್ವರು ಸೇರಿದಂತೆ ಒಟ್ಟು 19 ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವಕಪ್‌ ವಿಜೇತ ಭಾರತೀಯ ವನಿತಾ ಕಬಡ್ಡಿ ತಂಡದ ನಾಯಕಿ, ಕಾರ್ಕಳದ ಮಮತಾ ಪೂಜಾರಿ ಹಾಗೂ ಕ್ರಿಕೆಟಿಗ ವಿನಯ್‌ ಕುಮಾರ್‌ ಏಕಲವ್ಯ ಪ್ರಶಸ್ತಿ ಪಡೆಯುವ ಪ್ರಮುಖರಾಗಿದ್ದಾರೆ. ಸೋಮವಾರ ಸಂಜೆ ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚು ರಂಜನ್‌ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಅನಂತರ ಮಾತನಾಡಿ, ಏಕಲವ್ಯ ಪ್ರಶಸ್ತಿ ವಿಜೇತರಿಗೆ ತಲಾ 2 ಲಕ್ಷ ರೂ. ಹಾಗೂ ಜೀವಮಾನದ ಸಾಧನೆ ಪ್ರಶಸ್ತಿಗೆ ಆಯ್ಕೆಯಾದವರಿಗೆ ತಲಾ 1.50 ಲಕ್ಷ ರೂ. ನಗದು ನೀಡಲಾಗುವುದು ಎಂದು ತಿಳಿಸಿದರು. ಅಲ್ಲದೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸುವ ಪುರುಷ ಕ್ರೀಡಾಪಟುಗಳಿಗೆ ಸರಕಾರದ ವತಿಯಿಂದ ಸೂಟು, ಕೋಟು, ಟೈಗಳನ್ನು ಒದಗಿಸಲಾಗುವುದು; ಮಹಿಳಾ ಕ್ರೀಡಾಪಟುಗಳಿಗೆ ಅಪ್ಪಟ ಮೈಸೂರು ರೇಷ್ಮೆ ಸೀರೆ ನೀಡಲಾಗುವುದು ಎಂದರು. ಪ್ರಶಸ್ತಿಗಳಿಗೆ ನಡೆದ ಆಯ್ಕೆಯಲ್ಲಿ ಸಂಪೂರ್ಣ ಪಾರದರ್ಶಕ ನೀತಿಯನ್ನು ಅನುಸರಿಸಲಾಗಿದ್ದು, ಈ ಕ್ರೀಡಾಪಟುಗಳು 5 ವರ್ಷಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಪದಕಗಳ ಆಧಾರದಲ್ಲಿ, ಅವರೇ ನೀಡಿರುವ ಅಂಕಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಆ. 29 ಸಮಾರಂಭ ಆ. 29ರ ಸಂಜೆ 6 ಗಂಟೆಗೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಉಪಮುಖ್ಯಮಂತ್ರಿಗಳು, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು, ಒಲಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷರು ಸೇರಿದಂತೆ ಹಲವು ಗಣ್ಯರು ಭಾಗವ‌ಹಿಸಲಿದ್ದಾರೆ. ಪ್ರಶಸ್ತಿ ವಿಜೇತರ ಕುಟುಂಬ ಹಾಗೂ ಸ್ನೇಹಿತರಿಗಾಗಿ ತಲಾ 10 ಮಂದಿಗೆ ಉಚಿತ ಪಾಸ್‌ಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. Udayavani | Aug 27, 2012

Twitter Facebook Delicious Digg Favorites More

 
Twitter Facebook Delicious Digg Favorites More