ಕುಂದಪ್ರಭ ಯು.ಎಸ್.ಶೆಣೈ ಅವರಿಗೆ ರಾಜೇಶ್ ಶಿಬಾಜೆ ಪ್ರಶಸ್ತಿ

ಕುಂದಪ್ರಭ ಯು.ಎಸ್.ಶೆಣೈ ಅವರಿಗೆ ರಾಜೇಶ್ ಶಿಬಾಜೆ ಪ್ರಶಸ್ತಿ
ಕಾರ್ಕಳ: ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ವಿಜೇತ ದಿ.ರಾಜೇಶ್ ಶಿಬಾಜೆ ಪ್ರಶಸ್ತಿ ೨೦೦೭ ಕ್ಕೆ ಕುಂದಪ್ರಭ ಪತ್ರಿಕೆಯ ಸಂಪಾದಕ, ಕುಂದಾಪುರದ ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಯು.ಎಸ್ ಶೆಣೈ (ಯು.ಸುರೇಂದ್ರ ಶೆಣೈ) ಅವರಿಗೆ ನೀಡಲಾಗುತ್ತಿದೆ ಎಂದು ಬೆಂಗಳೂರಿನ ಪತ್ರಕರ್ತರ ವೇದಿಕೆ (ರಿ) ನ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನಲ್ಲಿ ವಾರ ಪತ್ರಿಕೆಯ ಶಖೆಯನ್ನು ಆರಂಭಿಸಿ ೨೦ ವರ್ಷಗಳಿಂದ ಕುಂದಪ್ರಭ ಪತ್ರಿಕೆಯನ್ನು ನಡೆಸುತ್ತಿರುವ ಅವರು ತಮ್ಮಸಾಮಾಜಿಕ ಕಾಳಜಿಗಳಿಂದ ಗಮನಸೆಳೆದಿದ್ದಾರೆ, ಅವರ ಸುಧೀರ್ಘ ಪತ್ರಿಕಾ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.ಎಂದು ಅವರು ಹೇಳಿದರು.
ಏಪ್ರಿಲ್ ೨೫ ರಂದು ಉಡುಪಿಯ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಪ್ರಾಂಶುಪಾಲ ಪ್ರೊ.ಜಿ. ಯೋಗಾನಂದ ಸಹಿತ ಗಣ್ಯರ ಉಪಸ್ಥಿಯಲ್ಲಿ ಈ ಗೌರವ ನೀಡಲಾಗುತ್ತಿದೆ. ಈ ಸಂಧರ್ಭದಲ್ಲಿ ಪತ್ರಿಕೋದ್ಯಮದ ಮೊದಲ ಪಾಠಗಳು ವಿಷಯದ ಕುರಿತು ಎಸ್.ಡಿ.ಎಂ.ಕಾಲೇಜಿನ ಬೊರ್ಗಲ್ ಗುಡ್ಡೆ ಮಂಜುನಾಥ ಉಪನ್ಯಾಸ ನೀಡಲಿರುವರು ಎಂದು ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತರ ಪರಿಚಯ:
೧೯೮೦-೮೧ ರಲ್ಲಿ ನವಭಾರತ ಪತ್ರಿಕೆಯ ಬಾತ್ಮೀದಾರರಾಗಿ ಪತ್ರಿಕಾ ಜೀವನ ಆರಂಭಿಸಿದ ಅವರು ಹೊಸದಿಗಂತ,ಮುಂಗಾರು,ಇಂಡಿಯನ್ ಎಕ್ಸ್ ಪ್ರೆಸ್, ಟೈಮ್ಸ್ ಆಫ್ ಡೆಕ್ಕನ್, ಕೆನರಾ ಟೈಮ್ಸ್ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.೧೯೯೧ ರಲ್ಲಿ ಅವರು ಕುಂದಪ್ರಭ ವಾರಪತ್ರಿಕೆಯನ್ನು ಆರಂಭಿಸಿ ನಡೆಸುತ್ತಿದ್ದಾರೆ.ಪ್ರತಿವರ್ಷ ಯುವ ಸಾಧಕರನ್ನು ಗುರುತಿಸಿ ಕೋ.ಮ.ಕಾರಂತ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ.ವಿದ್ಯಾರ್ಥಿಗಳಲ್ಲಿ ಮತ್ತು ಯುವ ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಹಾಗೂ ಪಶ್ಚಿಮ ಘಟ್ಟದಿಂದ ಹರಿದು ಬಂದು ಅರಬ್ಬಿ ಸಮುದ್ರ ಸೇರುವ ಕುಂದಾಪುರ ತಾಲೂಕಿನ ಐದು ನದಿಗಳ ತೀರ ಪಂಚ ಗಂಗಾವಳಿಯನ್ನು ಪರಿಸರ ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿ ಪಡಿಸಲು ತಾಲೂಕಿನಾಧ್ಯಂತ ಪಂಚ ಗಂಗಾವಳಿ ಅಭಿಯಾನ ಮತ್ತು ಪಂಚಗಂಗಾವಳಿ ಪ್ರದೇಶ ಮತ್ತು ಬಬ್ಬು ಕುದ್ರು ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಪ್ರೇರೇಪಿಸಲು ೨೦ ದಿನಗಳ ಪಂಚಗಂಗಾವಳಿ ಉತ್ಸವವನ್ನು ನಡೆಸುತ್ತಿರುವುದು ಅವರ ಸಾಧನೆಯ ಇನ್ನೊಂದು ಮುಖ.
೨೦೦೩ ರಲ್ಲಿ ಕುಂದಪ್ರಭ ಆರೋಗ್ಯ ಶಿಕ್ಷಣ ಟ್ರಸ್ಟ್ ಸ್ಥಾಪಿಸಿ ವ್ಯಕ್ತಿತ್ವ ವಿಕಸನಕ್ಕಾಗಿ ’ನುಡಿ ಬೆಳಕು’,ಶಿಕ್ಷಣದಲ್ಲಿ ಹಿಂದುಳಿದವರಿಗಾಗಿ ’ಜ್ಞಾನವೃದ್ಧಿ ತರಬೇತಿ’,ಉದಯೋನ್ಮುಖ ಬರಹಗಾರರ ಪುಸ್ತಕ ಪ್ರಕಟಣೆ ಮತ್ತು ಬಿಡಗಡೆ, ಗ್ರಂಥಾಲಯ- ಸಂಗೀತ ಶಾಲೆಗಳ ಸ್ಥಾಪನೆ ಮೂಲಕ ಸಮಾಜಿಕ ಚಟುವಟಕೆಗಳನ್ನು ನಡೆಸುತ್ತಾ ಬಂದಿದ್ದಾರೆ.
ಕುಂದಾಪುರ ಕಾರ್ಯನಿರತ ಸಂಘದ ಉಪಾಧ್ಯಕ್ಷ, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ, ಕುಂದಾಪುರ ಜೇಸಿಸ್‌ನ ಅಧ್ಯಕ್ಷ, ಕಂದಾಪುರ ರೋಟರಿ ದಕ್ಷಿಣ ಅಧ್ಯಕ್ಷ, ಕುಂದಾಪುರ ಭಂಡಾರ್ ಕಾರ‍್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಕರ್ಯದರ್ಶಿ, ಕರ್ನಾಟಕ ಕೊಂಕಣಿ ಅಕಾಡೆಮಿ ಸದಸ್ಯ, ಜೈಕೊಂಕಣಿ ಸಂಸ್ಥೆಯ ಅಧ್ಯಕ್ಷ, ಅಖಿಲ ಬಾರತ ಕೊಂಕಣಿ ಪರಿಷತ್ ಸಂಸ್ಥೆಯ
ಉಪಾಧ್ಯಕ್ಷ, ಕುಂದಪ್ರಭ ಟ್ರಸ್ಟ್ ಅಧ್ಯಕ್ಷ ಹೀಗೆ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಇವರ ಸಾಧನೆಯನ್ನು ಗೌರವಿಸಿ ೨೦ ಕ್ಕೂ ಹೆಚ್ಚು ಸಂಸ್ಥೆಗಳು ಗೌರವಿಸಿವೆ.ಯು ಶೇಷಗಿರಿ ಶೆಣೈ ಮತ್ತು ಶಾಂತಾ ಶೆಣೈ ಅವರ ಪುತ್ರರಾಗಿರುವ ಅವರು ಸಾಧನಾ ಶೆಣೈ ಅವರನ್ನು ವಿವಾಹವಾಗಿದ್ದಾರೆ.ಸುಷ್ಮಾ ಮತ್ತು ಸಂಗೀತಾ ಅವರ ಮಕ್ಕಳು.
ಆರಂಭದ ಶಿಕ್ಷಣವನ್ನು ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಮತ್ತು ಪದವಿಯನ್ನು ಭಂಡಾರ್ ಕಾರ‍್ಸ್ ಕಾಲೇಜಿನಲ್ಲಿ ಮುಗಿಸಿದರು.

Twitter Facebook Delicious Digg Favorites More

 
Twitter Facebook Delicious Digg Favorites More