ಶ್ರೀ ಜಯಪ್ರಕಾಶ್ ಮಾವಿನಕುಳಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

ಶ್ರೀ ಜಯಪ್ರಕಾಶ್ ಮಾವಿನಕುಳಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

       ಮೂಡಬಿದ್ರೆ: ನ.೧ ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‌ನ ಪ್ರಾಯೋಜಕತ್ವದ ೨೦೧೪ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಶ್ರೀ ಜಯಪ್ರಕಾಶ್ ಮಾವಿನಕುಳಿ ಅವರ ’ಕಾಲಯಾನ’ ಎಂಬ ಕವನಸಂಕಲನ ಹಸ್ತಪ್ರತಿಯು ಗೆದ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷರಾದ ಡಾ. ನಾ.ಮೊಗಸಾಲೆಯವರು ಪ್ರಕಟಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಒಟ್ಟು ೯೭ ಹಸ್ತಪ್ರತಿಗಳು ಬಂದಿದ್ದು,  ವಿಮರ್ಶಕರೂ, ಕವಿಗಳೂ ಆಗಿರುವ ಡಾ. ವಸಂತಕುಮಾರ್ ಪೆರ್ಲ ಮಂಗಳೂರು,ಶ್ರೀ ಸುಬ್ರಾಯ ಚೊಕ್ಕಾಡಿ, ಡಾ.ಎಸ್.ಆರ್. ಅರುಣಕುಮಾರ್ ಅವರುಗಳು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ.
       ೧೯೭೯ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು  ಹತ್ತು ಸಾವಿರದ ಗೌರವ ಸಂಭಾವನೆ ಮತ್ತು ತಾಮ್ರಪತ್ರ ಸನ್ಮಾನವನ್ನು ಒಳಗೊಂಡಿದೆ.  ಪ್ರತೀ ವರುಷದಂತೆ ಈ ವರುಷದ ಪ್ರಶಸ್ತಿ ಪ್ರದಾನ ಸಮಾರಂಭವು ೨೦೧೫ರ ಜನವರಿಯಲ್ಲಿ ಕಾಂತಾವರದ ’ಕನ್ನಡಭವನ’ದಲ್ಲಿ ನಡೆಯಲಿದ್ದು ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನವನ್ನು ನೆರವೇರಿಸಲಿರುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.
   
ಶ್ರೀ ಜಯಪ್ರಕಾಶ ಮಾವಿನಕುಳಿ ಅವರ ಪರಿಚಯ:
    ಸಮಾಜ ವಿಜ್ಞಾನ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳ ವಿದ್ವಾಂಸರಾಗಿರುವ ಡಾ. ಜಯಪ್ರಕಾಶ ಮಾವಿನಕುಳಿಯವರು ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕ, ರೀಡರ್, ಪ್ರೊಫೆಸರರಾಗಿ ೩೪ ವರ್ಷದ ಬೋಧನಾನುಭವ ಉಳ್ಳವರು. ಪ್ರತಿಷ್ಠಿತ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಿದೆ. ಅವರು ಮಂಡಿಸಿದ್ದ ’ರಾಜಕೀಯ ಮತ್ತು ಸಂಸ್ಕೃತಿ’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
    ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘಟನೆಯಲ್ಲಿ ಹಲವು ದಶಕಗಳ ಕಾಲ ದುಡಿದಿರುವ ಅವರು, ಮಂಗಳೂರು, ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳ ಅಧ್ಯಯನ ಮಂಡಳಿಗಳಲ್ಲಿ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಿದೆ. ಹಾಗೇ ಅವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ರಚನಾತ್ಮಕವಾಗಿ ಕಾರ್ಯನಿರ್ವಹಿಸಿರುವುದರ ಜೊತೆಗೆ  ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನಕಾರ್ಯದರ್ಶಿಯಾಗಿ ದುಡಿದ ಹೆಗ್ಗಳಿಕೆ ಅವರಿಗಿದೆ.
    ಸಂಸ್ಕೃತಿ ಚಿಂತಕರಾಗಿಯೂ ಡಾ. ಮಾವಿನಕುಳಿಯವರು ಕ್ರಿಯಾಶೀಲರಾಗಿದ್ದಾರೆ. ಸಾಹಿತ್ಯ, ರಂಗಭೂಮಿ, ಸಂಸ್ಕೃತಿ ಚಿಂತನೆಗೆ ಸಂಬಂಧಿಸಿದ ೪೯ ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ. ಕಾವ್ಯ, ಕಥೆ, ಕಾದಂಬರಿ, ಲಲಿತ ಪ್ರಬಂಧ, ವಿಚಾರ ಸಾಹಿತ್ಯ ಹೀಗೆ ಎಲ್ಲಾ ಪ್ರಕಾರಗಳಲ್ಲೂ  ಕೈಯಾಡಿಸಿರುವ ಅವರ ಕವನಸಂಗ್ರಹಗಳು: ’ಸಾಗರದಲ್ಲಿ ಸಾಯಂಕಾಲ’, ’ವಿರಹ ಕಡಲು’ ಇತ್ಯಾದಿ. ಕಥಾಸಂಕಲನಗಳು: ’ಕಾಲ’, ’ಚಂದಿರನೇತಕೆ ಓಡುವನಮ್ಮ’. ನಾಟಕಗಳು: ’ಅವಲೋಕನ’, ’ಅಶ್ವತ್ಥಾಮ’, ’ಶೆಫಾಲಿಕಾ’, ’ನಿರಾಕರಣ’, ’ಪಾರ್ಟಿ’, ’ಮಹಾಯಾತ್ರೆ’, ’ಕೊಡೆಯಪ್ಪನ ಕಥಾ ಪ್ರಸಂಗ’, ’ರೂಪಾಂತರ’, ’ಅಕ್ಬರ’ ಮೊದಲಾದುವು. ’ರತ್ನಾಕರ’, ’ಚೂಡಾಮಣಿ’, ’ಸುವರ್ಣ ಸಂಸ್ಕೃತಿ’, ’ಲಂಕೇಶರ ನಾಟಕಗಳು’, ’ನಮ್ಮ ಪ್ರೀತಿಯ ಸುಬ್ಬಣ್ಣ’, ’ಕಾರಂತ ಯುಗಾಂತ’, ’ಇಂದೂ ಇರುವ ಗಾಂಧಿ’ - ಅವರ ಸಂಪಾದಿತ ಕೃತಿಗಳಾಗಿವೆ. ಈಗಾಗಲೇ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಲಭಿಸಿರುವ  ಅವರಿಗೆ ಇದೀಗ ಮುದ್ದಣ ಕಾವ್ಯ ಪ್ರಶಸ್ತಿಯ ತುರಾಯಿ ಲಭಿಸಿದೆ.
                                                                                

Twitter Facebook Delicious Digg Favorites More

 
Twitter Facebook Delicious Digg Favorites More