ಸವಣೂರು ಸೀತಾರಾಮ ರೈ ಅವರಿಗೆ ಗ್ರಾಮೋತ್ಸವ ಗೌರವ ಪ್ರಕಟ


ಸಾಮಾಜಿಕ ಕ್ಷೇತ್ರದಲ್ಲಿ ಸಾಧಕರಾಗಿ ಗುರುತಿಸಲ್ಪಟ್ಟಿರುವ ಗ್ರಾಮೀಣ ಕ್ಷೇತ್ರದ ಸಾಧಕ, ಸಹಕಾರಿ ಧುರೀಣ, ಪ್ರಗತಿಪರ ಕೃಷಿಕ ಸವಣೂರು ಸೀತಾರಾಮ ರೈ ಅವರಿಗೆ ಗ್ರಾಮೋತ್ಸವ ಗೌರವವನ್ನು ಜನರಿ ೨೫ ರಂದು ಅಜೆಕಾರು ಕುರ್ಪಾಡಿಯಲ್ಲಿ ನಡೆಯುವ ಆದಿ ಗ್ರಾಮೋತ್ಸವದಲ್ಲಿ ನೀಡಲಾಗುತ್ತದೆ.
ಊರಿನ- ಸಮಾಜದ ಪ್ರಗತಿಗಾಗಿ ದುಡಿಯುವ ಮಹನೀಯರಿಗೆ ಅಥವಾ ಊರಿಗೆ ಕೀರ್ತಿ ತಂದ ಸಾಧಕರಿಗೆ ಈ ಗೌರವವನ್ನು ನೀಡಲಾಗುತ್ತಿದ್ದು ಪ್ರಸಿದ್ಧ ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ, ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿ ಮೊದಲಾದವರಿಗೆ ಮೊದಲ
ಹತ್ತು ಗ್ರಾಮೋತ್ಸವಗಳಲ್ಲಿ ಈ ಗೌರವ ನೀಡಲಾಗಿತ್ತು ಎಂದು ಕುರ್ಪಾಡಿ ಯುವ ವೃಂದದ ಗೌರವಾಧ್ಯಕ್ಷ ಡಾ. ಸಂತೋಷ ಕುಮಾರ್ ಶೆಟ್ಟಿ ಮತ್ತು ಗ್ರಾಮೋತ್ಸವದ ಪರಿಕಲ್ಪಕ ಶೇಖರ ಅಜೆಕಾರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸವಣೂರು ಸೀತಾರಾಮ ರೈ ಅವರು ದಕ ಜಿಲ್ಲಾ ಸಹಕಾರಿ ಬ್ಯಾಂಕ್ ನ ಸೂಪರ್ ವೈಸರ್ (ಮೇಲ್ವಿಚಾರಕ)ರಾಗಿ ೧೯೬೯ ರಲ್ಲಿ ವೃತ್ತಿ ಜೀವನ ಆರಂಭಿಸಿ ೧೯೮೬ ರಲ್ಲಿ ನಿವೃತ್ತರಾದರು.ಅದೇ ಬ್ಯಾಂಕ್‌ನಲ್ಲಿ ೧೦ ವರ್ಷ ನಿರ್ದೇಶಕರಾಗಿ, ೪ ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.ಸವಣೂರು ಸಿ. ಎ.ಬ್ಯಾಂಕ್ ಅಧ್ಯಕ್ಷರಾಗಿ ೨೦ ವರ್ಷಗಳ ಕಾಲ ಅಧ್ಯಕ್ಷರಾಗಿ, ದ.ಕ ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ರಾಮಕೃಷ್ಣ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ೮ ವರ್ಷ,ಪತ್ತೂರು ಭೂ ಬ್ಯಾಂಕಿನಲ್ಲಿ ೬ ವರ್ಷ,ಪುತ್ತೂರು
ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾಗಿ, ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲಾ ಸಮೂಹದ ಸಂಚಾಲಕರಾಗಿ, ಪುತ್ತೂರು
ಸಂತ ಫಿಲೋಮಿನಾ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ, ಮಂಗಳೂರಿನ
ಶ್ರೀ ಲಕ್ಷ್ಮಿ ಮೆಮೋರಿಯಲ್ ಟಸ್ಟ್‌ನ ನಿರ್ದೇಶಕರಾಗಿ, ಸವಣೂರು ಪದ್ಮಾಂಬಾ ಸಂಕೀರ್ಣದ ಸ್ಥಾಪಕರಾಗಿ, ಸವಣೂರು ಸಿಂಧೂರ ಜನಸೇವಾ
ಟ್ರಸ್ಟ್ ಅಧ್ಯಕ್ಷರಾಗಿ, ಪ್ರಗತಿ ಪರ ಕೃಷಿಕರಾಗಿ, ಪ್ರತಿಷ್ಠಿತ ವಿದ್ಯಾರಶ್ಮಿ ವಿದ್ಯಾ ಸಮೂಹ ಸಂಸ್ಥೆಗಳ ಸ್ಥಾಪಕರಾಗಿ ಅಮೂಲ್ಯ ಸೇವೆ ಸಲ್ಲಿಸಿರುವ ಅವರು ಸವಣೂರಿನ ಶಿಲ್ಪಿಯಾಗಿ ಸಲ್ಲಿಸಿರುವ ಅಪಾರ ಸೇವೆಗಾಗಿ ಈ ಗೌರವವನ್ನು ನೀಡಲಾಗುತ್ತಿದೆ.
ಇತ್ತೀಚಿಗೆ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿದ್ದ ಅವರು ಜಿಲ್ಲಾ, ತಾಲೂಕು ಮಟ್ಟದ ಅನೇಕ ಸಾಹಿತ್ಯ ಮತ್ತು ಇತರ ಸಮ್ಮೇಳಗಳನ್ನು ಸಂಘಟಿಸಿ ಕೀರ್ತಿಗಳಿಸಿದ್ದಾರೆ.
೧೪ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯದ ಶ್ರೇಷ್ಠ ಸಹಕಾರಿ ಪ್ರಶಸ್ತಿ, ರಾಜೀವ ಗಾಂಧಿ ಶಿರೋಮಣಿ ಪ್ರಶಸ್ತಿ, ಪುತ್ತೂರು ಬಂಟರ ಸಂಘದ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಅವರ ಸೇವೆಯನ್ನು ಅರಸಿಕೊಂಡು ಬಂದಿವೆ,
ಕಸ್ತೂರಿಕಲಾ ರೈ ಅವರನ್ನು ವಿವಾಹವಾಗಿದ್ದು ಮಹೇಶ್ ರೈ,ಡಾ. ರಾಜೇಶ ರೈ, ರಶ್ಮಿ ಅಶ್ವಿನ್ ಶೆಟ್ಟಿ ಅವರ ಮೂವರು ಮಕ್ಕಳು.

Twitter Facebook Delicious Digg Favorites More

 
Twitter Facebook Delicious Digg Favorites More