ಅಜೆಕಾರು ಗುಂಡಮೆ ಸೇತುವೆಯ ಕನಸು ಸಾಕಾರ ಎಂದು ಎದುರು ನೋಡುತ್ತಿದ್ದಾರೆ ಅಲ್ಲಿನ ಜನ!ಅಜೆಕಾರು ಗುಂಡಮೆ ಸೇತುವೆಯ ಕನಸು ಸಾಕಾರ ಎಂದು ಎದುರು ನೋಡುತ್ತಿದ್ದಾರೆ ಅಲ್ಲಿನ ಜನ!
ಚಿತ್ರ,ವರದಿ ಶೇಖರ ಅಜೆಕಾರು.

ಅಜೆಕಾರು:ಅಜೆಕಾರಿನಿಂದ ಮೂರು ಕಿಮಿ ದೂರದಲ್ಲಿ ಹರಿಯುವ ನದಿ.ಆ ನದಿಯಾಚೆಗೆ ಹತ್ತಾರು ಮನೆ ನೂರಾರು ಜನವಾಸ. ಆ ಊರಿನ ಹೆಸರು ಅಜೆಕಾರು ಗುಂಡಮೆ. ಅಲ್ಲಿ ಯಾರಿಗಾದರೂ ಆರೋಗ್ಯ ಸರಿಯಿಲ್ಲದಿದ್ದರೆ, ಯಾರಾದರೂ ತೀರಿ ಹೋದರೆ ಅವರನ್ನು ಊರಿಗೆ ತರಲು ಪಡುವ ಹರ ಸಾಹಸದ ಕತೆ ವಿರೋಧಿಗಳಿಗೂ ಬೇಡ.
ನದಿಗೆ ಅಡ್ಡಲಾಗಿ ಊರವರೇ ಸೇರಿ ಕಟ್ಟಿರುವ ಅನಿವಾರ್‍ಯ ಸೇತುವೆಗೆ ಅನೇಕ ವರ್ಷಗಳ ಇತಿಹಾಸ ಇದೆ.ಅದರ ಮೇಲೆ ಕಾಲಿಟ್ಟು ಹೋಗುವಾಗ ಸ್ವತಂತ್ರ ಭಾರತದಲ್ಲಿ ಹೀಗೂ ಇದೆಯೇ ಎಂದು ಅನಿಸದಿರದು.ಅದನ್ನು ದಾಟಲೆಂದು ಹೋದ ಹಳ್ಳಿಯ ಹಿನ್ನಲೆಯ ಈ ವರದಿಗಾರನಿಗೆ ಒಂದು ಕ್ಷಣ ಸ್ವರ್ಗ-ನರಕದ ಚಿತ್ರ ಕಣ್ಣೆದುರು ಬಂತು!
ಅಲ್ಲಿನ ಜನ ಆಗ ಕಾಂಗ್ರೆಸ್, ಬಳಿಕ ಬಿಜೆಪಿ ಮತ್ತು ಈಗಿನ ಅದೇ ಎಂಎಲ್‌ಎ ಅವರಿಗೆ ಮತ್ತು ಎಲ್ಲಾ ಆಧಿಕಾರಿಗಳಿಗೆ ಕಳೆದ ಎರಡು ದಶಕಗಳಿಂದ ಮನವಿ ಬರೆದು ಬರೆದು ಸುಸ್ತಾಗಿದ್ದಾರೆ.ಯಾವುದೇ ಕ್ಷಣ ಅಪಾಯ ಸಂಭವಿಸ ಬಹುದಾದ ಈ ಸೇತುವೆ ಸಂಪರ್ಕಕ್ಕೆ ಆಧಾರವಾಗಿರುವುದು ನಿಜ. ಅದರೆ ನಿಡಿದಾದ, ನದಿಯಲ್ಲಿ ನಾಲ್ಕು ಕಂಬಗಳನ್ನು ನಿಲ್ಲಿಸಿ ಅದಕ್ಕೆ ಅಡ್ಡ ಮರದ ಹಲಗೆ ಹಾಕಿ, ಕಂಗಿನ ಮತ್ತು ಬಿದಿರಿನ ಅಡ್ಡ ಹಾಸುಗಳನ್ನು ಸೇರಿಸಿ ಸರಿಗೆಯ ಸಹಾಯದಿಂದ ರಚಿಸಲಾದ ತೂಗು ಸೇತುವೆ. ಇದನ್ನು ನೋಡಿದ ಯಾರಾದರೂ ಈ ಭಾಗದ ಜನರಿಗಾಗಿ ಒಂದು ಕನಿಕರದ ಹನಿ ಉದುರಿಸದೆ ಇರಲಾರರು.
ಯಾರೂ ಕೂಡಾ ಈ ಜನರ ಸಮಸ್ಯೆ ಅರಿಯದೆ ಇರುವುದರಿಂದ ಇಲ್ಲಿನ ಜನರಿಗೆ ಸೇತುವೆ ಇನ್ನೂ ಕನಸು. ಇದು ಬುದ್ಧಿವಂತರ ಜಿಲ್ಲೆ ಉಡುಪಿಯ ಕತೆ ಎಂದರೆ ಯಾರಾದರೂ ಆಶ್ಚರ್ಯ ಪಡದೇ ವಿಧಿಯಿಲ್ಲ.
ಅಜೆಕಾರಿನಿಂದ ಅಂಡಾರು ರಸ್ತೆಯಲ್ಲಿ ಸಾಗಿ ಬೊಂಡುಕುಮೇರಿ ದಾಟಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರ ಮನೆಗಿಂತ ಅನತಿ
ಹಿಂದೆಯೇ ತಿರುಗಿ ಸ್ವಲ್ಪ ಮುಂದೆ ಹೋದರೆ ಆ ಭಯಂಕರ ರಸ್ತೆಯಲ್ಲಿ ನದಿಯಲ್ಲಿಗೆ ಒಂದು- ಒಂದೂವರೆ ಕಿಮಿ ಇದೆ.ಅಲ್ಲಿಯೇ ಇರುವುದು ಈ ತೂಗು ಸೇತುವೆ.ಮಳೆಗಾಲದಲ್ಲಿ ತುಂಬಿ ಹರಿಯುವ ಅಪಾಯಕಾರಿ, ಭಯಂಕರ ನದಿಯನ್ನು ದಾಟಲು ಊರವರೆ ಕಟ್ಟಿದ ಈ ಸೇತುವೆ ಎಂಬ ಸ್ವಯಂ ಸಂಪರ್ಕ ದಾರಿ ಮತ್ತು ಅದನ್ನು ನಿರ್ಮಿಸಿದವರನ್ನು ಅಭಿನಂದಿಸ ಬಹುದು ಆದರೆ ಅದರ ಬದಲಾಗಿ ಇಲ್ಲೊಂದು ವಾಃನ ದಾಟುವಂತಹ ಸೇತುವೆ ನಿರ್ಮಿಸಿ ಕೊಡಿ ಎಂದು ದೊಂಬಾಲು ಬಿದ್ದರೂ ಕೇಳಿಸಿಕೊಳ್ಳದ ಸರಕಾರದ ಅಕ್ಷಮ್ಯ ಅಪರಾಧವನ್ನು ಅಭಿನಂಧಿಸುವುದು ಬಿಡಿ ಇತಿಹಾಸ ಕ್ಷಮಿಸಲಾರದು.
ಮಕ್ಕಳು ,ವೃದ್ಧರೂ ,,,,, ಕೈಯಲ್ಲಿ ಜೀವ
ನದಿ ದಾಟಿ ಗುಂಡಮೆಗೆ ಕಾಲಿಡುವಾಗಲೇ ನಮಗೆ ಕಾಣ ಸಿಗುವ ತೂಗು ಸೇತುವೆ " ಅನೇಕ ಅವಕಾಶಗಳ ನಡುವೆಯೂ, ಸ್ವಾತಂತ್ರ ಬಂದು ೬೦ ವರ್ಷ ದಾಟಿದ್ದರೂ ನಾವಿನ್ನು ಸಾಧಿಸಿದ್ದುಷ್ಟು ಎಂಬುದನ್ನು ತೋರಿಸುವಂತೆ ನಮ್ಮನ್ನು ಅಣಕಿಸುತ್ತಿದೆ.ಅಲ್ಲಿಂದ ಮುಂದೆ ಹೋದರೆ ದುರ್ಗಮ ಕಾಡು.ನೆಕ್ಸಲರ ನೆಲೆವೀಡು.ಸರ್ಕಾರದ ದಿವ್ಯ ನಿರ್ಲಕ್ಷ ಮುಂದಿನ ದಿನಗಳಲ್ಲಿ ಆ ಪ್ರದೇಶದ ಜನರು ನಕ್ಸಲ್ ಚಟುವಟಿಕೆಗೆ ಬೆಂಬಲ ನೀಡುವಂತೆ ಪ್ರೇರೇಪಣೆ ನೀಡಿದರೂ ಆಶ್ಚರ್‍ಯವಿಲ್ಲ.ಯಾವುದಾದರೂ ಯೋಜನೆಯಡಿ ಇಲ್ಲಿಗೊಂದು ಸೇತುವೆ ಆಗಲಿ ಎಂಬುದು ಈ ಭಾಗದ ಜನರ ಬಹಳ ದಿನದ ಆಸೆ. ಈಡೇರಲು ಇನ್ನೆಷ್ಟು ಕಾಯ ಬೇಕು ಎಂಬುದು ಯಕ್ಷ ಪ್ರಶ್ನೆ.ಈ ಸೇತುವೆ ದಾಟುವಾಗ ನಿಜವಾಗಿಯೂ ಮಕ್ಕಳು ವೃದ್ಧರು ಕೈಯಲ್ಲಿಯೇ ಜೀವ ಹಿಡಿದುಕೊಂಡು ದಾಟ ಬೇಕಾದ ಪರಿಸ್ಥಿತಿ ಇದೆ. ಕೆಲ ಸಮಯದ ಹಿಂದೆ ಮೃತರಾಧ ನಿಕೋಲಸ್ ಡಿಸೋಜಾ ಅವರ ಸಂಸ್ಕಾರ ನಡೆಸಲು ಶವ ಪೆಟ್ಟಿಗೆಯನ್ನು ಹೊತ್ತು ತರುವಾಗ ತರುವವರೂ ದೇವರಪಾದ ಸೇರುವ ಅಪಾಯದಿಂದ ನಡೆದು ಹೋಗುವ ಚಿತ್ರ ಮಾಧ್ಯಮಗಳ ಮೂಲಕ ಗಮನ ಸೆಳೆದು ಕೆಲವರ ಕರುಳು ಹಿಂಡಿದ ಅನುಭವ ನೀಡಿದ್ದರೂ ಆಡಳಿತ ಶಾಹಿ ವ್ಯವಸ್ಥೆಗೆ ಈ ಕಷ್ಟ ಅರಿವಾಗಲೇ ಇಲ್ಲ.
ವೇದಿಕೆಯಲ್ಲಿ ಗಂಟೆಗಟ್ಟಳೆ ಮಾತನಾಡುವ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆ ನಿಜವಾಗಿಯೂ ಅರ್ಥವಾಗಲೇ ಇಲ್ಲ. ಅರ್ಥ ಆಗಿದ್ದರೆ ಈ ಗುಂಡಮೆಯ ಅಪಾಯಕಾರಿ ನಿಡಿದಾದ ತೂಗು ಸೇತುವೆಗೆ ಮುಕ್ತಿ ಸಿಕ್ಕಿ ಹತ್ತಾರು ವರ್ಷಗಳೇ ಉರುಳುತ್ತಿತ್ತು.
ಶಾಸಕ ಗೋಪಾಲ ಭಂಡಾರಿ ಅವರು "ಈ ಸೇತುವೆಗೆ ೧೦ ಲಕ್ಷ ರೂಪಾಯಿ ಇರಿಸಲಾಗಿದ್ದು ಅಕ್ಟೋಬರ್‌ನಲ್ಲಿ ಅದರ ಕೆಲಸಕ್ಕೆ ಚಾಲನೆ ನೀಡಲಾಗುವುದು" ಎಂದಿದ್ದಾರೆ. ಹಾಗಾಗಿ ಸ್ವಲ್ಪ ದಿನ ನೋಡ ಬೇಕಲ್ಲ ಸಾರ್ ಎಂದು ಹೇಳುವಾಗ ಸಂತ್ರಸ್ತರ ಮುಖದಲ್ಲಿ ಹೊಸ ಹೊಳಪು.
ಇದನ್ನು ಅರ್ಥ ಮಾಡಿಕೊಳ್ಳ ಬೇಕು. ಈ ಅಪಾಯದ ಸೇತುವೆಯಲ್ಲಿ ಅನ್ಯ ಮಾರ್ಗ ಇಲ್ಲದೇ ೧೫-೧೬ ಮಕ್ಕಳು ಶಾಲೆಗೆ ಹೋಗ ಬೇಕಾಗಿದ್ದು ಮನೆಯವರು ದೇವರೇ ನಮ್ಮ ಮಕ್ಕಳನ್ನು ಅಪಾಯವಿಲ್ಲದೇ ಆ ಕಡೆ ಈ ಕಡೆ ದಾಟಿಸಪ್ಪ ಎನ್ನದೇ ವಿಧಿಯಿಲ್ಲ.
ಮುಂದಿನ ಚುನಾವಣೆವರೆಗೆ ಸೇತುವೆ ಆಗದಿದ್ದರೆ ಇಲ್ಲಿನ ಜನ ಖಂಡಿತಾ ಪ್ರತಿಭಟನೆಯ ಹಾದಿ ಹಿಡಿಯದೇ ಇರುವುದಿಲ್ಲ! ೨೦೧೨ ಆದರೂ ಇಲ್ಲಿ ಕಾಡಿನ ನಡುವಿನ ನೂರಾರು ನಿವಾಸಿಗಳಿಗೆ ಅವರ ಕನಸು ನನಸಾಗುವ ವರ್ಷವಾಗಲಿ.

Twitter Facebook Delicious Digg Favorites More

 
Twitter Facebook Delicious Digg Favorites More